ಸೋಮವಾರಪೇಟೆ, ಮೇ 22: ಕೊರೊನಾ ವೈರಸ್ ಭೀತಿಯಿಂದ ಎಲ್ಲೆಡೆ ಲಾಕ್‍ಡೌನ್ ಆಗಿದ್ದ ಸಂದರ್ಭ, 108 ಉಚಿತ ಆಂಬ್ಯುಲೆನ್ಸ್‍ನ ಸಿಬ್ಬಂದಿಗಳು ಹಗಲಿರುಳೆನ್ನದೇ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ದಿನಂಪ್ರತಿ ನೂರಾರು ಕಿ.ಮೀ. ಓಡಾಟ ನಡೆಸಿದ್ದಾರೆ.

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕಿಯರ ಜತೆಗೆ ಆಂಬ್ಯುಲೆನ್ಸ್ ಸಿಬ್ಬಂದಿಗಳೂ ಮಾರ್ಚ್ 22 ರಿಂದ ಇಲ್ಲಿಯವರೆಗೆ ಬರೋಬ್ಬರಿ 15,047 ಕಿ.ಮೀ. ಕ್ರಮಿಸಿ ನೂರಾರು ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಸೇವೆ ಸಲ್ಲಿಸಿದ್ದಾರೆ.

ಕಳೆದ ಮಾರ್ಚ್ 22ರ ನಂತರ ಏಪ್ರಿಲ್ ಮೊದಲ ದಿನದವರೆಗೆ 2380 ಕಿ.ಮೀ. ಓಡಾಟ ನಡೆಸಿರುವ ಆಂಬ್ಯುಲೆನ್ಸ್, ಏಪ್ರಿಲ್ ತಿಂಗಳ ಎರಡು ವಾರದಲ್ಲಿ 4667 ಕಿ.ಮೀ. ಕ್ರಮಿಸಿದೆ. ಮೇ ತಿಂಗಳಿನಲ್ಲಿ ತಾ. 21 ರವರೆಗೆ 8 ಸಾವಿರ ಕಿ.ಮೀ. ಓಡಾಟ ನಡೆಸಿದ್ದು, 108 ಆಂಬ್ಯುಲೆನ್ಸ್ ಚಾಲಕರುಗಳಾದ ಅರುಣ್, ಪ್ರಸನ್ನ, ಶುಶ್ರೂಷಕಿಯರಾದ ಮಮತ, ಹೇಮಲತ ತೊಡಗಿಸಿಕೊಂಡಿದ್ದಾರೆ.

ಲಾಕ್‍ಡೌನ್ ಸಂದರ್ಭದಲ್ಲಂತೂ ಟ್ಯಾಕ್ಸಿ, ಆಟೋಗಳ ಸಂಚಾರ ನಿಷೇಧವಾಗಿದ್ದರಿಂದ ಸಣ್ಣಪುಟ್ಟ ಖಾಯಿಲೆಗಳಿಗೂ ಜನಸಾಮಾನ್ಯರು 108ಗೆ ಕರೆ ಮಾಡಿ ಸೇವೆಗಾಗಿ ಮನವಿ ಸಲ್ಲಿಸಿದ್ದಾರೆ. ಸೋಮವಾರಪೇಟೆ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನು ಕರೆತರುವದು, ಇಲ್ಲಿಂದ ಹೊರ ಜಿಲ್ಲೆಗಳ ಆಸ್ಪತ್ರೆಗೆ ರೋಗಿಗಳನ್ನು ಸಾಗಾಟಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿಗಳು ಉತ್ತಮ ಸೇವೆ ಸಲ್ಲಿಸಿದ್ದು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರೊಂದಿಗೆ ಆಂಬ್ಯುಲೆನ್ಸ್‍ನಲ್ಲಿ ಹೊರಗುತ್ತಿಗೆ ಕೆಲಸ ನಿರ್ವಹಿಸುವ ಚಾಲಕರು ಮತ್ತು ಶುಶ್ರೂಷಕಿಯರ ಸೇವೆಯೂ ಸ್ಮರಣೀಯವಾಗಿದೆ. - ವಿಜಯ್ ಹಾನಗಲ್