ನಾಪೋಕ್ಲು, ಮೇ 22: ಗ್ರಾಮ ಪಂಚಾಯಿತಿಯಿಂದ ಕಂದಾಯ ವಸೂಲಿ ಕ್ರಮ ಖಂಡಿಸಿ ಗ್ರಾಮಸ್ಥರು ಮತ್ತು ಅಂಗಡಿ ಮಾಲೀಕರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪಂಚಾಯಿತಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಗ್ರಾಮದ ಜನರು ಹತ್ತಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಕಡ್ಡಾಯ ಕಂದಾಯ ವಸೂಲಾತಿಗೆ ಮುಂದಾಗಿದೆ. ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ದಂಡ ವಿಧಿಸುತ್ತಿದೆ. ಅಂಗಡಿಗಳಿಂದ ದಂಡ ವಸೂಲು ಮಾಡುತ್ತಿದೆಯೆಂದು ಆರೋಪಿಸಿ ಸಾರ್ವಜನಿಕರು ಎಮ್ಮೆಮಾಡು ಗ್ರಾಮಪಂಚಾಯಿತಿ ಅಧ್ಯಕ್ಷರ ವಿರುದ್ಧ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮಪಂಚಾಯಿತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಲಾಕ್‍ಡೌನ್ ಸಂದರ್ಭದಲ್ಲಿ ಜನರಿಂದ ಕಡ್ಡಾಯವಾಗಿ ಕರ ವಸೂಲು ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದರೂ ಇಲ್ಲಿನ ಗ್ರಾಮಪಂಚಾಯಿತಿ ಅಂಗಡಿಗಳಿಂದ ಹಣ ವಸೂಲಾತಿಗೆ ಮುಂದಾಗಿದೆ ಎಂದು ಆರೋಪಿಸಿದ ಪ್ರತಿಭಟನಾ ಕಾರರು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಚಕ್ಕೇರ ಇಸ್ಮಾಯಿಲ್ ಮಾತನಾಡಿ ಲಾಕ್‍ಡೌನ್ ಸಂದರ್ಭದಲ್ಲಿ ಗ್ರಾಮಸ್ಥರು ತುತ್ತಿನ ಕೂಳಿಗೂ ಪರದಾಡು ವಂತಾಗಿದೆ. ಈ ಸಂದರ್ಭದಲ್ಲಿ ಕಡ್ಡಾಯ ಕಂದಾಯ ವಸೂಲಾತಿ ಮಾಡುತ್ತಿರುವುದು ಖಂಡನೀಯ. ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹುಸೇನ್ ಮುಸ್ಲಿಯಾರ್ ಮಾತನಾಡಿ ಎಮ್ಮೆಮಾಡಿನಲ್ಲಿ ವ್ಯಾಪಾರ ಆರಂಭಿಸಿ ನಾಲ್ಕು ತಿಂಗಳಾಗಿದೆ. ಗ್ರಾಮ ಪಂಚಾಯಿತಿ ಲೈಸೆನ್ಸ್ ಕೊಡಲು ಸತಾಯಿಸುತ್ತಿದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಆರೋಪಿಸಿ ಪಿಡಿಒ ಹಾಗೂ ಗ್ರಾಮಪಂಚಾಯಿತಿ ಅಧ್ಯಕ್ಷರು ಅಂಗಡಿಯಿಂದ ಬಲವಂತವಾಗಿ ದಾಸ್ತಾನು ಕೊಂಡೊಯ್ದಿದ್ದಾರೆ. ದಂಡ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವ್ಯಾಪಾರಿ ಹುಸೇನ್ ಮುಸ್ಲಿಯಾರ್ ಅಲವತ್ತುಕೊಂಡರು.

ಎಮ್ಮೆಮಾಡು ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಿ ಐದು ವರ್ಷಗಳು ಕಳೆದಿವೆ. ಲಕ್ಷಾಂತರ ರೂ. ವ್ಯರ್ಥವಾಗಿದೆ. ಜನರಿಗೆ ಒಂದು ಲೀಟರ್ ನೀರು ಕೂಡ ಸಿಕ್ಕಿಲ್ಲ. ಸಮೀಪದಲ್ಲೇ ನೀರಿನ ಮೋಟಾರ್ ಇದೆ. ಶಾಲೆಗೆ ನೀರು ಪೂರೈಕೆ ಮಾಡಲು ಸಂಪರ್ಕವೇ ನೀಡಿಲ್ಲ. ಜನರಿಗೂ ಉಪಯೋಗವಾಗಿಲ್ಲ. ಪಂಚಾಯಿತಿ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ಆಲಿ ಕುಟ್ಟಿ ಆರೋಪಿಸಿದರು. ಆಮಿನ ಮತ್ತು ಐಸಮ್ಮ ಮಾತನಾಡಿ ಎಷ್ಟು ಬೇಡಿಕೊಂಡರೂ ಬಲಾತ್ಕಾರದಿಂದ ನಿರ್ಧಾಕ್ಷಿಣ್ಯವಾಗಿ ಗ್ರಾಮಪಂಚಾಯಿತಿ ದಂಡ ವಸೂಲಾತಿ ಮಾಡುತ್ತಿದೆ. ಗ್ರಾಮದ ಬಡಜನರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ತಪ್ಪಿದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಹಮ್ಮದ್, ಅಬ್ಬಾಸ್ ಕೆ.ಪಿ, ಹಕಿಮ್, ಅಬ್ದುಲ್ಲ ಇದ್ದು ಅಧಿಕ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.

- ದುಗ್ಗಳ