ಸೋಮವಾರಪೇಟೆ,ಮೇ 19: ಕೊರೊನಾ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನೂರಾರು ಮಂದಿ ಕಾರ್ಮಿಕರು ನಿನ್ನೆಯಿಂದ ತಮಿಳುನಾಡಿಗೆ ಕೆಎಸ್‍ಆರ್‍ಟಿಸಿ ಬಸ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.

ನಿನ್ನೆ 7 ಬಸ್‍ಗಳು ಸೋಮವಾರಪೇಟೆಯಿಂದ ತೆರಳಿದ್ದರೆ, ಇಂದು 5 ಬಸ್‍ಗಳಲ್ಲಿ ಕಾರ್ಮಿಕರು ತಮ್ಮೂರಿನತ್ತ ಪಯಣ ಬೆಳೆಸಿದರು. ಕಳೆದ 4 ತಿಂಗಳ ಹಿಂದೆ ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಕಾಫಿ ತೋಟಗಳಿಗೆ ಆಗಮಿಸಿ ಲೈನ್ ಮನೆಗಳಲ್ಲಿ ಕುಟುಂಬದೊಂದಿಗೆ ನೆಲೆಯಾಗಿದ್ದ ನೂರಾರು ಕಾರ್ಮಿಕರು ಇದೀಗ ಸ್ವಂತ ಗ್ರಾಮಗಳಿಗೆ ಗಂಟುಮೂಟೆ ಕಟ್ಟಿಕೊಂಡು ಪ್ರಯಾಣ ಬೆಳೆಸುತ್ತಿದ್ದಾರೆ.

ಇಂದು ಬೆಳಿಗ್ಗೆ ಹಣಕೋಡು ಗ್ರಾಮದಿಂದ ಒಂದು ಬಸ್ ತಮಿಳುನಾಡಿನತ್ತ ತೆರಳಿದ್ದರೆ, ಮಧ್ಯಾಹ್ನದ ನಂತರ 4 ಬಸ್‍ಗಳಲ್ಲಿ ಕಾರ್ಮಿಕರು ತಮ್ಮೂರಿನತ್ತ ಮುಖ ಮಾಡಿದರು. ಕಾಫಿ ತೋಟದ ಲೈನ್ ಮನೆಯಲ್ಲಿ ನೆಲೆಸಿ ಕಾಫಿ ಕೊಯ್ಲು, ಕರಿಮೆಣಸು ಕೊಯ್ಲು, ಮರ ಕಪಾತು ಸೇರಿದಂತೆ ಇನ್ನಿತರ ಕೆಲಸ ದಲ್ಲಿ ನಿರತರಾಗಿದ್ದ ಕಾರ್ಮಿಕರನ್ನು ಇದೀಗ ಮಾಲೀಕರುಗಳು ಊರಿಗೆ ಕಳುಹಿಸಲು ಮುಂದಾಗುತ್ತಿದ್ದು, ಆನ್‍ಲೈನ್ ಮೂಲಕ ಪಾಸ್ ಪಡೆದು, ಕೆಎಸ್‍ಆರ್ ಟಿಸಿ ಬಸ್‍ಗಳಲ್ಲಿ ಕಳುಹಿಸುತ್ತಿದ್ದಾರೆ.

ಪಾಸ್‍ಗೆ ಅರ್ಜಿ ಸಲ್ಲಿಸಿ ಆರೋಗ್ಯ ತಪಾಸಣೆಯೂ ನಡೆದಿರುವ ಕಾರ್ಮಿಕರನ್ನು ಸೋಮವಾರಪೇಟೆ ಸರ್ಕಾರಿ ಬಸ್ ನಿಲ್ದಾಣದಿಂದ ನೇರ ವಾಗಿ ತಮಿಳುನಾಡಿಗೆ ಕರೆದೊಯ್ಯುವ ವ್ಯವಸ್ಥೆ ಆಗುತ್ತಿದೆ. ಪಾಸ್ ಪಡೆದರೂ ಸಹ ಆರೋಗ್ಯ ತಪಾಸಣೆಗೆ ಒಳಗಾಗದ ಸುಮಾರು 25 ಕಾರ್ಮಿಕರನ್ನು ಸೋಮವಾರಪೇಟೆ ಯಿಂದ ಬಸ್‍ನಲ್ಲಿ ಮಡಿಕೇರಿಗೆ ಕರೆದೊಯ್ದು ಅಲ್ಲಿಂದ ಸ್ವಗ್ರಾಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.