ಸಿದ್ದಾಪುರ, ಮೇ 19: ತ್ಯಾಗತ್ತೂರು ಗ್ರಾಮದ ಭಗವತಿ ದೇವಾಲಯಕ್ಕೆ ತೆರಳುವ ಸಾರ್ವಜನಿಕ ರಸ್ತೆ ಕಾಮಗಾರಿಯು ವಿಳಂಬವಾಗುತ್ತಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಗತ್ತೂರು ಭಗವತಿ ದೇವಾಲಯಕ್ಕೆ ತೆರಳುವ ಸಾರ್ವಜನಿಕ ರಸ್ತೆಯ ದುರಸ್ತಿ ಕಾಮಗಾರಿ ಕಳೆದ ಆರು ತಿಂಗಳ ಹಿಂದೆ ಆರಂಭವಾಗಿದೆ. ಆದರೆ, ಇದೀಗ ಮಳೆಗಾಲ ಸನಿಹದಲ್ಲಿದ್ದರೂ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಈ ವ್ಯಾಪ್ತಿಯ ನಿವಾಸಿಗಳು ನಡೆದಾಡಲು ಪರದಾಡುವಂತಾಗಿದೆ.

ಈ ಕುರಿತು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರೂ ಸ್ಪಂದನ ಸಿಗಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರೂ. 50 ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು, ಕೂಡಲೇ ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಲೋಕೋಪ ಯೋಗಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರಾದ ಜಯಂತ್, ಮನು ಮಹೇಶ್ ಇನ್ನಿತರರು ಹಾಜರಿದ್ದರು.