*ಕೊಡ್ಲಿಪೇಟೆ, ಮೇ 19: ಮರಳಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕೊಡ್ಲಿಪೇಟೆ ಸಮೀಪದ ನೀರುಗುಂದ ನಿವಾಸಿ, ಮರಳು ಗುತ್ತಿಗೆದಾರರಾಗಿರುವ ಬಿ.ಎಸ್. ವಿನೋದ್ ಎಂಬವರ ಮೇಲೆ ಕೊಡ್ಲಿಪೇಟೆಯ ನಿವಾಸಿಗಳಾದ ಕೆ.ಪಿ. ಮಂಜು, ಪ್ರದೀಪ್, ಕೆಳಕೊಡ್ಲಿ ನಿವಾಸಿ ರಾಜೇಶ್ ಅವರುಗಳು ಮರಳು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದು ತೀವ್ರವಾಗಿ ಹಲ್ಲೆ ನಡೆಸಿರುವ ಬಗ್ಗೆ ವಿನೋದ್ ಅವರು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳೆದ ತಾ. 16ರಂದು ರಾತ್ರಿ ಘಟನೆ ನಡೆದಿದ್ದು, ವೈದ್ಯಕೀಯ ಚಿಕಿತ್ಸೆ ಪಡೆದ ನಂತರ ತಡವಾಗಿ ತಾ. 19ರಂದು ಠಾಣೆಗೆ ದೂರು ನೀಡಲಾಗಿದೆ. ತಾ. 16ರ ರಾತ್ರಿ 8 ಗಂಟೆಗೆ ಕರೆಮಾಡಿದ ಮಂಜು, ಮುಖ್ಯವಾದ ಕೆಲಸವಿದ್ದು, ಮನೆಯಿಂದ ಬರುವಂತೆ ತಿಳಿಸಿದ್ದಾನೆ.

ವಿನೋದ್ ಅವರು ತಮ್ಮ ಕಾರಿನಲ್ಲಿ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನದ ಬಳಿ ಬರುತ್ತಿದ್ದಂತೆ ಮೂವರು ಆರೋಪಿಗಳು ಕಾರನ್ನು ಜಖಂಗೊಳಿಸಿ, ದೈಹಿಕ ಹಲ್ಲೆ ನಡೆಸಿದ್ದಲ್ಲದೇ, 10 ಲೋಡ್ ಮರಳು ನೀಡದಿದ್ದರೆ ಕೊಲೆ ಮಾಡುವದಾಗಿ ಬೆದರಿಕೆಯೊಡ್ಡಿರುವ ಬಗ್ಗೆ ವಿನೋದ್ ಅವರು ದೂರು ನೀಡಿದ್ದು, ಶನಿವಾರಸಂತೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.