ಮಡಿಕೇರಿ, ಮೇ 19: ಲಾಕ್ಡೌನ್ ಸಂದರ್ಭ ಸಭೆಗಳನ್ನು ನಡೆಸಲಾಗದ ಹಿನ್ನೆಲೆ ರೋಟರಿ ಮಿಸ್ಟಿ ಹಿಲ್ಸ್ನಿಂದ ಪ್ರತೀ ಮಂಗಳವಾರದ ವಾರದ ರೋಟರಿ ಸಭೆಗಳನ್ನು ಎರಡು ತಿಂಗಳಿನಿಂದ ಇ-ಸಭೆಗಳಾಗಿ ಪರಿವರ್ತಿಸಲಾಗಿದೆ. ಪ್ರತೀ ಮಂಗಳವಾರ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಮಿಸ್ಟಿ ಹಿಲ್ಸ್ ಸದಸ್ಯರು ವಾಟ್ಸಪ್ ಗ್ರೂಪ್ನಲ್ಲಿ ಆಯೋಜಿತ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಾರ್ಥನೆಯಿಂದ ಮೊದಲ್ಗೊಂಡು ರೋಟರಿ ಸಭೆಯ ಎಲ್ಲಾ ಕಾರ್ಯಸೂಚಿಗಳನ್ನೂ ಈ ಸಭೆಯಲ್ಲಿ ಜಾರಿಗೆ ತರಲಾಗಿದ್ದು ಯೋಜನಾ ಕಾರ್ಯಗಳಿಗೆ ಇದು ನೆರವಾಗಿದೆ.
ಮಿಸ್ಟಿ ಹಿಲ್ಸ್ ಇ-ಸಭೆಗಳ ಮೂಲಕ ರೋಟರಿಯಲ್ಲಿ ಕಡ್ಡಾಯವಾಗಿ ಸಭೆ ನಡೆಸಬೇಕಾದ ನಿಯಮವನ್ನು ಜಾರಿಯಲ್ಲಿಟ್ಟಿರುವುದು ಪ್ರಶಂಸನೀಯ. ಈ ಮೂಲಕ ಸೇವಾ ಸಂಸ್ಥೆಯಾದ ರೋಟರಿಯು ಲಾಕ್ಡೌನ್ ಸಂದರ್ಭ ಅಗತ್ಯವಿರುವ ಜನಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗಿದೆ ಎಂದು ರೋಟರಿ ವಲಯ ಸಹಾಯಕ ಗವರ್ನರ್ ಪಿ. ನಾಗೇಶ್ ಮತ್ತು ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಪ್ರಶಂಶಿಸಿದ್ದಾರೆ.