ಶ್ರೀಮಂಗಲ, ಮೇ 18 : ಕೊರೊನಾ ಹಿನ್ನೆಲೆ ಲಾಕ್‍ಡೌನ್‍ನಿಂದ ಜಿಲ್ಲೆಯ ಕೃಷಿ ಮತ್ತು ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಹೊರ ಜಿಲ್ಲೆಯಲ್ಲೇ ಉಳಿದುಕೊಂಡಿದ್ದು, ಕಾರ್ಮಿಕರ ಸಮಸ್ಯೆಯಿಂದ ಕೃಷಿ ಚಟುವಟಿಕೆ ಮಂದಗತಿಯಲ್ಲಿ ಸಾಗಿದೆ. ಇನ್ನೊಂದೆಡೆ ಕಾರ್ಮಿಕರಿಲ್ಲದೇ ಸಕಾಲದಲ್ಲಿ ಆಗಬೇಕಿರುವ ಕೆಲಸ ಆಗದೇ ಮುಂಗಾರು ಸಮೀಪಿಸುತ್ತಿರು ವಂತೆಯೆ ಆತಂಕವು ಎದುರಾಗಿದೆ. ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ ಹೊರಗಿನಿಂದ ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಜಿಲ್ಲೆಯಲ್ಲಿಯೇ ಲಭ್ಯವಿರುವ ಕಾರ್ಮಿಕರ ಸಂಖ್ಯೆ ಕಡಿಮೆಯಿದೆ. ಆದ್ದರಿಂದ ಕೇರಳ ರಾಜ್ಯದ ಕುಟ್ಟ, ತೋಲ್ಪಟ್ಟಿ ಮೂಲಕ, ಮೈಸೂರು ಜಿಲ್ಲೆಯಿಂದ ತಿತಿಮತಿ ಆನೆಚೌಕೂರು, ಕುಟ್ಟ ನಾಣಚ್ಚಿ ಗೇಟ್, ಬಾಳೆಲೆ ನಿಟ್ಟೂರು ಗೇಟ್ ಮೂಲಕ ದಕ್ಷಿಣ ಕೊಡಗಿನ ಭಾಗಕ್ಕೆ ದಿನನಿತ್ಯ ವಾಹನದ ಮೂಲಕ ಕಾರ್ಮಿಕರು ಆಗಮಿಸಿ ಸಂಜೆ ಹಿಂತಿರುಗುತ್ತಾರೆ. ಆದರೆ ಕೊರೊನಾದಿಂದ ಅಂತರ್‍ರಾಜ್ಯ ಮತ್ತು ಅಂತರ್‍ಜಿಲ್ಲೆ ವಾಹನ ಸಂಚಾರ ಹಾಗೂ ಕಾರ್ಮಿಕರ ಸಂಚಾರಕ್ಕೆ ಅವಕಾಶ ಇಲ್ಲದೇ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದೆ. ಕೆಲವೆಡೆ ಮಾತ್ರ ಸ್ವಂತ ಕಾರ್ಮಿಕರನ್ನು ಹೊಂದಿರುವ ಬೆಳೆಗಾರರು ತಮ್ಮ ಕೆಲಸಗಳನ್ನು ಸಕಾಲದಲ್ಲಿ ಮಾಡಿರುವುದು ಕಂಡುಬಂದಿದೆ. ಸ್ಥಳೀಯವಾಗಿ ಲಭ್ಯವಿರುವ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದ್ದು, ಬೆಳೆಗಾರರ ಬೇಡಿಕೆಗನುಸಾರ ಕಾರ್ಮಿಕರು ಲಭ್ಯವಾಗುತ್ತಿಲ್ಲ ಎಂದು ರೈತ ಸಂಘದ ಪ್ರಮುಖ

(ಮೊದಲ ಪುಟದಿಂದ) ಚಿಮ್ಮಂಗಡ ಗಣೇಶ್ ಹೇಳಿದ್ದಾರೆ.

ಮುಂಗಾರು ಮಳೆಯ ಮುನ್ನ ಕಾಫಿ ತೋಟದಲ್ಲಿ ಮರಗಳ ನೆರಳು ಬಿಡಿಸುವ, ಕಾಫಿ ಗಿಡಗಳ ಕಪಾತು, ಕಾಫಿ ಗಿಡಗಳಿಗೆ ಗೊಬ್ಬರ ಹಾಕಲು ಬುಡ ಬಿಡಿಸುವುದು, ಗೊಬ್ಬರ ಹಾಕುವುದು, ಕಾಳುಮೆಣಸು ಮತ್ತು ಅಡಿಕೆ ಬೆಳೆಗೆ ಕೊಳೆ ರೋಗ ತಡೆಯಲು ಮದ್ದು ಸಿಂಪಡನೆ ಕೆಲಸಗಳಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತಾರೆ. ಇದಲ್ಲದೇ ಭತ್ತದ ಕೃಷಿ ಮಾಡಲು ತೋಡುಗಳನ್ನು ಹೂಳೆತ್ತುವುದು, ಏರಿಗಳನ್ನು ಸರಿಪಡಿಸುವುದು, ಬರೆ ಕಾಡು ಕಡಿಯುವುದು ಸೇರಿದಂತೆ ಕೆಲಸಗಳು ಮಾಡಬೇಕಾಗುತ್ತದೆ. ಆದರೆ ಕಾರ್ಮಿಕ ಕೊರತೆಯಿಂದ ದಕ್ಷಿಣ ಕೊಡಗಿನ ಬಹುತೇಕ ಕಡೆ ಇಂತಹ ಕಾಮಗಾರಿಗಳು ನಡೆಯುತ್ತಿರುವುದು ಕಂಡು ಬಂದಿಲ್ಲ.

ಕಳೆದ ವರ್ಷದಂತೆ ದಕ್ಷಿಣ ಕೊಡಗಿನ ಬಹುಭಾಗದಲ್ಲಿ ನೇಂದ್ರ ಬಾಳೆ ಕೃಷಿ ಮತ್ತು ಶುಂಠಿ ಕೃಷಿ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷ ಕಾರ್ಮಿಕರ ಸಮಸ್ಯೆಯಿಂದ ಬೆಳೆದ ಬೆಳೆಗೆ ಮಾರುಕಟ್ಟೆ ದೊರೆಯುವ ವಿಶ್ವಾಸವಿಲ್ಲದೆ ಅಂತಹ ಕೃಷಿಗಳನ್ನು ಕೈಬಿಟ್ಟಿರುವುದು ಕಂಡುಬಂದಿದೆ.

ಕಾರ್ಮಿಕರ ಲಭ್ಯತೆ ಇಲ್ಲದೇ ಇರುವುದರಿಂದ ಮುಂಗಾರಿಗೆ ಮುನ್ನ ನೆರಳು ಮರಗಳನ್ನು ಬಿಡಿಸದಿದ್ದರೆ ಗಾಳಿ ಮಳೆಗೆ ಮುರಿದು ಬೀಳುವ ಆತಂಕ ಎದುರಾಗಿದೆ. ಅಲ್ಲದೇ ಕಾಳು ಮೆಣಸು ಹಬ್ಬಿರುವ ಮರಗಳ ನೆರಳು ತೆಗೆಯದಿದ್ದರೆ ಫಸಲಿನ ಹೂ ಬಿಡಲು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಶ್ರೀಮಂಗಲದ ಪ್ರಗತಿಪರ ರೈತ ಚಟ್ಟಂಡ ರಘು ಹೇಳಿದ್ದಾರೆ.

ಮುಂಗಾರು ಮಳೆಗೆ ಮುನ್ನ ಕಾಳು ಮೆಣಸು ಮತ್ತು ಅಡಿಕೆ ಬೆಳೆಗೆ ಕೊಳೆ ರೋಗ ತಡೆಯಲು ಮದ್ದಿನ ಸಿಂಪಡನೆ ಅಗತ್ಯವಾಗಿದೆ. ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಸೇರಿದಂತೆ 100 ಇಂಚಿಗೂ ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಮದ್ದು ಸಿಂಪಡನೆ ಮಾಡದಿದ್ದರೆ ಅಡಿಕೆ ಫಸಲು ಸಂಪೂರ್ಣವಾಗಿ ಕೊಳೆರೋಗಕ್ಕೆ ತುತ್ತಾಗಿ ಉದುರಿ ಬೀಳುತ್ತದೆ. ಇದಲ್ಲದೇ ಕಾಳು ಮೆಣಸಿನ ಬಳ್ಳಿಗೆ ಸಹ ಮುಂಗಾರು ಪೂರ್ವದಲ್ಲಿ ಮತ್ತು ಮುಂಗಾರು ನಂತರ ಮದ್ದು ಸಿಂಪಡನೆ ಮಾಡಿ ಬಳ್ಳಿಗೆ ಕೊಳೆರೋಗ ತಗುಲಿ ಸಾಯುವುದನ್ನು ತಡೆಗಟ್ಟಲಾಗುತ್ತದೆ. ಅಡಿಕೆ ಹಾಗೂ ಕಾಳು ಮೆಣಸುಗಳಿಗೆ ಮುಂಗಾರು ಪೂರ್ವ ಹಾಗೂ ನಂತರದಲ್ಲಿ ಕನಿಷ್ಟ ಎರಡು ಬಾರಿ ಸಿಂಪಡನೆ ಮಾಡದಿದ್ದರೆ ಬೆಳೆ ನಷ್ಟವಾಗುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.

ಕಾರ್ಮಿಕರ ಕೊರತೆಯಿಂದ ಕಾಫಿ ತೋಟದಲ್ಲಿ ಮರ ಕಪಾತು ಹಾಗೂ ನೆರಳು ತೆಗೆಯದೇ ಇದ್ದಲ್ಲಿ ಅತೀ ತೇವಾಂಶಕ್ಕೆ ಹಾಗೂ ಬೆಳಕು ಕಡಿಮೆಯಿಂದ ಕಾಫಿ ಫಸಲು ಕುಂಠಿತವಾಗುವ ಆತಂಕ ಇದೆ ಎಂದು ಅವರು ಅನಿಸಿಕೆÀ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷ ಬೆಳೆದಿರುವ ನೇಂದ್ರ ಬಾಳೆಯನ್ನು ಲಾಕ್‍ಡೌನ್‍ನಿಂದ ಸಾಗಾಟ ಮಾಡಲಾಗದೆ ಅಪಾರ ಪ್ರಮಾಣದಲ್ಲಿ ಬಾಳೆಗಳು ಗೊನೆಯಲ್ಲಿಯೇ ಹಣ್ಣಾಗಿ ಉದುರುತ್ತಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ನೇಂದ್ರ ಬಾಳೆ ಬೆಳೆದ ಬೆಳೆಗಾರರಿಗೆ ನಷ್ಟ ಉಂಟಾಗಿದೆ ಎಂದು ಟಿ. ಶೆಟ್ಟಿಗೇರಿಯ ಚಟ್ಟಂಡ ನಟೇಶ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ವರ್ಷ ನೇಂದ್ರ ಬಾಳೆಗೆ ಮಾರುಕಟ್ಟೆ ಕುಸಿತ ಮತ್ತು ಬೆಳೆದ ಬೆಳೆಯನ್ನು ಸಾಗಾಟ ಮತ್ತು ಮಾರಾಟ ಮಾಡಲು ಕಷ್ಟವಾಗಿದೆ. ಮುಂದಿನ ವರ್ಷಕ್ಕಾಗಿ ಹಲವು ಎಕರೆ ಜಾಗದಲ್ಲಿ ನೇಂದ್ರ ಬಾಳೆ ಕೃಷಿ ಮಾಡಲು ಉದ್ದೇಶಿಸಲಾಗಿತ್ತು. ಕಾರ್ಮಿಕರ ಕೊರತೆ ಮತ್ತು ಮಾರುಕಟ್ಟೆ ತೊಂದರೆಯಿಂದ ನೇಂದ್ರ ಬಾಳೆ ಕೃಷಿಯನ್ನು ವಿಸ್ತರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಹರಿಹರದ ಬೆಳೆಗಾರ ಧರ್ಮಜ ಉತ್ತಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ಕಾಫಿ, ಕಾಳು ಮೆಣಸುನೊಂದಿಗೆ ಕಳೆದ ಹಲವು ವರ್ಷದಿಂದ ನಿರಂತರವಾಗಿ ಬಾಳೆ ಹಾಗೂ ಶುಂಠಿ ಕೃಷಿಯನ್ನು ಮಾಡುತ್ತಾ ಬಂದಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕೌಶಲ್ಯಯುತ ಕಾರ್ಮಿಕರನ್ನು ಬಳಸಿಕೊಂಡು ಕೃಷಿ ಮಾಡಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಬೆಳೆದ ಬಾಳೆ ಹಾಗೂ ಶುಂಠಿಯನ್ನು ಮಾರಾಟ ಮಾಡಲು ಸಾಧ್ಯವಾಗದೇ ದೊಡ್ಡ ನಷ್ಟವಾಗಿದೆ. ಇದರಿಂದ ಬಾಳೆ ಕೃಷಿಯನ್ನು ಕೈಬಿಡುತ್ತಿದ್ದು, ಶುಂಠಿ ಕೃಷಿಯನ್ನು ಅಲ್ಪ ಪ್ರಮಾಣದಲ್ಲಿ ಮಾತ್ರ ಮಾಡಲು ನಿರ್ಧರಿಸಿರುವುದಾಗಿ ಬಾಡಗರಕೇರಿಯ ಬೆಳೆಗಾರ ಮಿದೇರಿರ ಲಿವನ್ ನಿರಾಶೆ ವ್ಯಕ್ತಪಡಿಸಿದರು. ಕಾರ್ಮಿಕರ ಕೊರತೆಯಿಂದ ದಕ್ಷಿಣ ಕೊಡಗಿನ ಪ್ರಮುಖ ವಿದ್ಯುತ್ ಮಾರ್ಗಗಳಿಗೆ ಅಡಚಣೆಯಾಗುವ ಮರದ ರೆಂಬೆಗಳನ್ನು ತೆಗೆಯುವ ಕಾಮಗಾರಿಯು ಕೂಡ ಸ್ಥಗಿತವಾಗಿದೆ. -ಹರೀಶ್ ಮಾದಪ್ಪ