ಕಣಿವೆ, ಮೇ 17: ಕಳೆದ ಎರಡು ವರ್ಷಗಳ ಹಿಂದೆ ಹಾರಂಗಿ ಹಾಗೂ ಹಟ್ಟಿಹೊಳೆ ವ್ಯಾಪ್ತಿಯಲ್ಲಿ ಅನಿರೀಕ್ಷಿತವಾಗಿ ಎರಗಿ ಬಂದ ದಿಢೀರ್ ಪ್ರವಾಹದಿಂದಾಗಿ ವ್ಯಾಪಕವಾದ ಭೂಕುಸಿತ ಸಂಭವಿಸಿ ಮುಕ್ಕೋಡ್ಲು ವ್ಯಾಪ್ತಿಯ ಗ್ರಾಮಗಳ ಕೃಷಿ ಭೂಮಿ, ಕಾಫಿ ತೋಟ, ಗದ್ದೆಗಳು ನೆಲಸಮಗೊಂಡಿತ್ತು. ಇದರಿಂದಾಗಿ ಇಲ್ಲಿನ ಕೃಷಿಕರ ಬದುಕು ಮೂರಾಬಟ್ಟೆಯಾಗಿತ್ತು. ಅಕ್ಕರೆಯಿಂದ ನೆಟ್ಟು ಬೆಳೆಸಿದ್ದ ಕಾಫಿ ಗಿಡಗಳು ಮಣ್ಣು ಪಾಲಾಗಿದ್ದವು. ಇದರಿಂದಾಗಿ ಇಲ್ಲಿನ ಕೃಷಿಕರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದರು. ಕಾಫಿಗೆ ಪರ್ಯಾಯವಾಗಿ ಯಾವ ಕೃಷಿ ಮಾಡಿದರೆ ಚೆನ್ನ ಎಂದು ಯೋಚಿಸಿದ ಮುಕ್ಕೋಡ್ಲು ಗ್ರಾಮದ ಯುವ ಕೃಷಿಕ ಶ್ಯಾಂ ಸುಬ್ಬಯ್ಯ ಮೀನುಗಾರಿಕೆ ಕೃಷಿ ಮಾಡಲು ಯೋಚಿಸಿದರು. ಮೀನು ಕೃಷಿಗೆ ಸ್ವಂತದ್ದಾದ ಕೆರೆ ಬೇಕು. ಎಲ್ಲಿ ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂದು ಯೋಚಿಸಿದ ಬಳಿಕ ತಮ್ಮ ಕೃಷಿ ಭೂಮಿಯನ್ನು ನೆಲಸಮ ಮಾಡಿ ಹಂಚಿ ಹರಿದ ಹಟ್ಟಿ ಹೊಳೆ ನದಿಯ ದಂಡೆಯ ಒಂದು ಎಕರೆ ಭೂಮಿಯಲ್ಲಿ ಕೆರೆ ಮಾಡಲು ನಿರ್ಧರಿಸಿದರು. ಕೆರೆಯ ಸುತ್ತಲೂ ಏರಿಯನ್ನು ನಿರ್ಮಿಸಿದರು. ಕೃತಕವಾಗಿ ನಿರ್ಮಾಣ ಮಾಡಿದ ಕೆರೆಗೆ ಸ್ವಾಭಾವಿಕವಾಗಿ ಹರಿವ ನೀರಿನ ಸೆಲೆಯೊಂದಕ್ಕೆ ಕಾಲುವೆಯ ರೂಪ ಕೊಟ್ಟರು. ಇದೀಗ ಈ ಕೆರೆಯ ತುಂಬಾ ನೀರು ತುಂಬಿಸಿದ್ದಾರೆ. ಈ ಕೆರೆಗೆ ಕನಿಷ್ಟ ನಾಲ್ಕು ಸಾವಿರ ಮೀನು ಮರಿಗಳನ್ನು ತಂದು ಬಿಡುವ ಯೋಜನೆ ಇದೆ ಎಂದು ಶ್ಯಾಂ ಸುಬ್ಬಯ್ಯ ಹೇಳುತ್ತಾರೆ. ಮೀನು ಕೃಷಿ ಮಾಡುವ ಸದುದ್ದೇಶದಿಂದ ನಿರ್ಮಿಸಿರುವ ಸುಸಜ್ಜಿತವಾದ ಕೆರೆಗೆ ಇದೀಗ ಬರೋಬ್ಬರಿ ಐದೂವರೆ ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿದ್ದಾರೆ. ಕೆರೆಯ ಒಂದು ಬದಿಯ ಏರಿಯ ಅಂಚಿನಲ್ಲೇ ಹರಿಯುತ್ತಿರುವ ಹಟ್ಟಿಹೊಳೆ ನೀರಿನ ಮಟ್ಟ ಏರಿಕೆಯಾಗಿ ಕೆರೆಯ ಏರಿಯ ಮಣ್ಣು ಕುಸಿತವಾಗದಂತೆ ಕಾಡು ಕಲ್ಲುಗಳ ತಡೆಗೋಡೆ ಕಟ್ಟುವ ಅಥವಾ ಗಿಡಗಳನ್ನು ನೆಟ್ಟು ಬೆಳೆಸುವ ಕುರಿತು ಆಲೋಚಿಸುತ್ತಿದ್ದೇನೆ ಎನ್ನುತ್ತಾರೆ ಸುಬ್ಬಯ್ಯ. ನಮಗೆ ಕಳೆದ ಎರಡು ವರ್ಷಗಳಿಂದ ಯಾವುದೇ ಕೃಷಿ ಚಟುವಟಿಕೆ ಸಾಧ್ಯವಾಗುತ್ತಿಲ್ಲ. ಆರ್ಥಿಕವಾಗಿ ಬಹಳಷ್ಟು ಸೋತಿದ್ದೇನೆ. ಆದ್ದರಿಂದ ಆದಾಯದ ಮೂಲ ಕಂಡುಕೊಳ್ಳಲು ಸಾಲ ಮಾಡಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದೇನೆ. ಮೀನುಗಾರಿಕಾ ಇಲಾಖೆ ನಮ್ಮಂತಹ ಕೃಷಿಕರ ನೆರವಿಗೆ ಧಾವಿಸಬೇಕು. ಸಹಾಯಧನ ನೀಡುವ ಮೂಲಕ ಪೆÇ್ರೀತ್ಸಾಹಿಸಬೇಕು ಎನ್ನುತ್ತಾರೆ ಶ್ಯಾಂ ಸುಬ್ಬಯ್ಯ. ಈ ಬಗ್ಗೆ ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ದರ್ಶನ ಅವರನ್ನು ಸಂಪರ್ಕಿಸಿದಾಗ, ಸದ್ಯಕ್ಕೆ ಮೀನು ಕೃಷಿಕರಿಗೆ ಯಾವುದೇ ಪೆÇ್ರೀತ್ಸಾಹ ಧನ ನೀಡುವ ಯಾವುದೇ ಯೋಜನೆಗಳು ಈ ವರ್ಷ ಇಲಾಖೆಯಲ್ಲಿಲ್ಲ. ಮುಂದಿನ ದಿನಗಳಲ್ಲಿ ಬಂದರೂ ಬರಬಹುದು ಗೊತ್ತಿಲ್ಲ. ಈ ಹಿಂದಿನ ವರ್ಷಗಳಲ್ಲಿ ಒಂದು ಹೆಕ್ಟೇರ್ ಮೀನು ಉತ್ಪಾದನಾ ಕೆರೆಗೆ ಘಟಕ ವೆಚ್ಚವಾಗಿ ಏಳುವರೆ ಲಕ್ಷ ರೂಪಾಯಿಗಳನ್ನು ನೀಡುತ್ತೇವೆ. ಈ ಪೈಕಿ ಶೇ. 40 ಸಾಮಾನ್ಯ ವರ್ಗದವರಿಗೆ, ಶೇ. 60 ಸಾಮಾನ್ಯ ಮಹಿಳೆಯರಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಸಹಾಯಧನ ನೀಡುವ ಯೋಜನೆ ಇತ್ತು ಎಂದು ಮಾಹಿತಿ ನೀಡುತ್ತಾರೆ ದರ್ಶನ ಅವರು. ಒಟ್ಟಾರೆ ಹೇಳುವುದಾದರೆ ಪ್ರಕೃತಿ ಮುನಿಸಿನಿಂದಾಗಿ ಹಾಳಾಗಿರುವ ಕೃಷಿ ಚಟುವಟಿಕೆಗಳನ್ನು ಪುನರ್ ರೂಪಿಸಲು ಅಥವಾ ಪರ್ಯಾಯವಾದ ಕೃಷಿ ಮಾಡುವ ಯುವ ರೈತರಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿ ಸಹಕರಿಸುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿಸುವತ್ತ ಹೆಜ್ಜೆ ಇಡಬೇಕಿದೆ ಅಷ್ಟೆ. ಮುಕ್ಕೋಡ್ಲು ಗ್ರಾಮದ ಶ್ಯಾಂ ಸುಬ್ಬಯ್ಯ ಅವರ ಈ ವಿನೂತನ ಯೋಚನೆ ಹಾಗೂ ಯೋಜನೆ ಆ ಭಾಗದ ಯುವಕರಲ್ಲಿ ಹೊಸ ಆಯಾಮಗಳಿಗೆ ನಾಂದಿಹಾಡಬೇಕಿದೆ.

- ಕೆ.ಎಸ್. ಮೂರ್ತಿ