ಕೂಡಿಗೆ, ಮೇ 17: ಜಿಲ್ಲೆಯ ರೈತರು ತಮ್ಮ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಜಮೀನಿನ ಅಧಾರ ಮೇರೆಗೆ ಹೈಬ್ರೀಡ್ ಬೀಜಗಳನ್ನು ಬಿತ್ತನೆ ಮಾಡುವುದರಿಂದ ಉತ್ತಮವಾದ ಬೆಳೆಯನ್ನು ಬೆಳೆಯಲು ಅನುಕೂಲವಾಗುತ್ತದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕೂಡಿಗೆ ಕೃಷಿ ಕೇಂದ್ರದಲ್ಲಿರುವ ಮಣ್ಣು ಆರೋಗ್ಯ ಪರೀಕ್ಷಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್.ರಾಜಶೇಖರ ಮನವಿ ಮಾಡಿದರು.

ಜಿಲ್ಲೆಯ ಪ್ರಮುಖ ಮಣ್ಣು ಆರೋಗ್ಯ ಪರೀಕ್ಷಾ ಕೇಂದ್ರ ಕೂಡಿಗೆಯಲ್ಲಿದ್ದು ಈ ಕೇಂದ್ರದ ಮೂಲಕ ರೈತರಿಗೆ ಮಣ್ಣು ಪರೀಕ್ಷೆಯ ಉದ್ದೇಶಗಳು, ಮಣ್ಣು ಮಾದರಿ ಸಂಗ್ರಹಣೆ, ಮಣ್ಣು ಮಾದರಿಯನ್ನು ಯಾವಾಗ ತೆಗೆಯಬೇಕು ಮಾದರಿ ಸಂಗ್ರಹಿಸುವ ವಿಧಾನ ಸೇರಿದಂತೆ ಅನೇಕ ವಿಷಯಗಳನ್ನು ಈಗಾಗಲೇ ಅನೇಕ ಬಾರಿ ತರಬೇತಿ ಸಮಯದಲ್ಲಿ ಮಾಹಿತಿ ನೀಡಲಾಗಿದೆ. ಅಲ್ಲದೆ ಕೂಡಿಗೆಯ ಈ ಕೇಂದ್ರದಲ್ಲಿ ರೈತರು ತಂದುಕೊಟ್ಟ ಮಣ್ಣನ್ನು ಪರೀಕ್ಷಿಸಿ, 12 ಬಗ್ಗೆಯ ವಿಶ್ಲೇಷಣೆಯ ಮಾಹಿತಿಯನ್ನು ಮಣ್ಣನ್ನು ಪರೀಕ್ಷೆಗೆ ಕೊಟ್ಟವರಿಗೆ ತಿಳಿಸಿ ನಂತರ ಮಣ್ಣು ಆರೋಗ್ಯ ಚೀಟಿಯನ್ನು ನೀಡಲಾಗುವುದು ಅದರ ಅನುಗುಣವಾಗಿ ಆಯಾ ಬೆಳೆಗೆ ರೈತರು ಮುಂದಾಗಬೇಕು ಎಂದು ತಿಳಿಸಿದರು.

ರೈತರು ಮಣ್ಣು ಪರೀಕ್ಷೆಯ ನಂತರ ತಮ್ಮ ಭೂಮಿಯಲ್ಲಿ ಸಾವಯವ ಗೊಬ್ಬರ ಮತ್ತು ಎಲೆ ಗೊಬ್ಬರ ಬಳಕೆ ಮಾಡುವ ಜೊತೆಗೆ ಮೇಲ್ ಗೊಬ್ಬರವಾಗಿ ರಾಸಾಯನಿಕ ಗೊಬ್ಬರ ಮಾತ್ರ ಬಳಕೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.