ಮಡಿಕೇರಿ, ಮೇ 16: ಬಹುಭಾಷಾ ತಾರೆ, ಕೊಡಗಿನವರಾದ ನಟಿ ಮುಂಡಚಾಡಿರ ರಶ್ಮಿಕಾ ಮಂದಣ್ಣ ಹಾಗೂ ಕುಟುಂಬದವರು ಕೊರೊನಾ ವಿರುದ್ಧದ ಹೋರಾಟದಲ್ಲಿ ಕಾರ್ಯತತ್ಪರರಾಗಿರುವವರಿಗೆ ಸದ್ದಿಲ್ಲದೆ ಸ್ಪಂದನದ ನೆರವು ಒದಗಿಸುತ್ತಿದ್ದು, ಇವರ ಈ ಸೇವೆ ತಾ. 17 ರಂದು (ಇಂದು) ಮುಕ್ತಾಯವಾಗಲಿದೆ.

ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳು, ಹೋಂಗಾಡ್ರ್ಸ್, ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಸುಮಾರು 150 ರಿಂದ 170 ಜನರಿಗೆ ಇವರು ಅಪರಾಹ್ನದ ಭೋಜನದ ವ್ಯವಸ್ಥೆಯನ್ನು ಕಳೆದ ಹಲವು ದಿನಗಳಿಂದ ಮಾಡುತ್ತಿದ್ದಾರೆ. ವೀರಾಜಪೇಟೆ ಸೆರಿನಿಟಿ ಹಾಲ್‍ನ ಮಾಲೀಕರೂ ಆಗಿರುವ ಇವರು ಸೆರಿನಿಟಿಯಲ್ಲಿ ದಿನಂಪ್ರತಿ ಭೋಜನವನ್ನು (ಮಾಂಸಾಹಾರ ಸಹಿತವಾಗಿ) ತಮ್ಮ ಖರ್ಚು -ವೆಚ್ಚದಿಂದಲೇ ತಯಾರಿಸುತ್ತಿದ್ದು, ಅದನ್ನು ನಗರ ಪೊಲೀಸ್ ಠಾಣಾ ಆವರಣದಲ್ಲಿನ ಮೆಸ್‍ಗೆ ಸಾಗಿಸಿ ಉಣಬಡಿಸುತ್ತಿದ್ದಾರೆ.

ಮಾಕುಟ್ಟ ಗೇಟ್‍ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೂ ಇಲ್ಲಿಂದ ಊಟ ಪೂರೈಕೆಯಾಗುತ್ತಿದೆ. ತಾ. 7 ರಿಂದ ನಟಿ ರಶ್ಮಿಕಾರ ಅಭಿಲಾಷೆಯಂತೆ ಈ ಸೌಲಭ್ಯ ಒದಗಿಸಲಾಗುತ್ತಿದ್ದು, ಈ ಕಾರ್ಯ ತಾ. 17 ರಂದು (ಇಂದು) ಮುಕ್ತಾಯ ವಾಗಲಿದೆ. ಹಗಲು - ಇರುಳೆನ್ನದೆ ದುಡಿಯುವ ಸಿಬ್ಬಂದಿಗಳಿಗೆ ಸಾಧ್ಯವಾಗುವ ನೆರವು ನೀಡಬೇಕೆಂದು ಈ ಹಿಂದೆ ಮನೆಗೆ ಆಗಮಿಸಿದ್ದ ಪತ್ರಿ ರಶ್ಮಿಕಾ ಬಯಕೆ ವ್ಯಕ್ತಪಡಿಸಿದ್ದು, ಇದರಂತೆ ಈ ಕಾರ್ಯಕ್ಕೆ ಮುಂದಾಗಿದ್ದಾಗಿ ತಂದೆ ಮದನ್ ಮಂದಣ್ಣ ತಿಳಿಸಿದರು.

ಸೆರಿನಿಟಿ ಸಿಬ್ಬಂದಿಗಳ ಮೂಲಕವೇ ಗುಣಮಟ್ಟದ ಭೋಜನವನ್ನು ತಯಾರಿಸಲಾಗುತ್ತಿದೆ. ಮಾಂಸಾಹಾರ ಸಹಿತವಾಗಿ ಆಹಾರ ಒದಗಿಸ ಲಾಗುತ್ತಿದ್ದು, ಅಂದಾಜು ರೂ. 1 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಇದನ್ನು ಪೂರೈಸಲಾಗುತ್ತಿದೆ. ಪ್ರತಿದಿನ 150 ರಿಂದ 170 ಸಿಬ್ಬಂದಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ವ್ಯವಸ್ಥಾಪಕ ವಿಕ್ಕಿ ಮಾಹಿತಿ ನೀಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರತರಿಗೆ ಕೆಲ ದಿನ ಕುಡಿಯಲು ಜ್ಯೂಸ್ ವ್ಯವಸ್ಥೆ ಯನ್ನೂ ಅಲ್ಲಲ್ಲಿಗೇ ನೀಡಲಾಗಿದೆ ಎಂದು ಅವರು ಹೇಳಿದರು.