ಕೂಡಿಗೆ, ಮೇ 17 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಈಗಾಗಲೇ ಕಾದಿರಿಸಿದ ಎರಡು ಎಕರೆ ಪ್ರದೇಶದಲ್ಲಿ ನಿವೇಶನ ರಹಿತರಿಗೆ ಜಾಗವನ್ನು ನೀಡುವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ 15 ವರ್ಷಗಳಿಂದಲೂ ಹುದುಗೂರು ಸಮೀಪದಲ್ಲಿ ಜಾಗವನ್ನು ಖರೀದಿಸಲಾಗಿತ್ತು. ಅದರೆ ಪ್ರವಾಹದಿಂದ ಆ ಜಾಗ ನೀರಿನಿಂದಾವೃತವಾಯಿತು. ಆದ್ದರಿಂದ ಅದರ ಬದಲು ಈಗಾಗಲೇ ಕಂದಾಯ ಇಲಾಖೆಯ ಮೂಲಕ ಬ್ಯಾಡಗೊಟ್ಟ ಗ್ರಾಮದಲ್ಲಿ ನಿವೇಶನದ ಜಾಗವನ್ನು ಗುರುತಿಸಲಾಗಿದ್ದು, ಇದುವರೆಗೂ ಅದನ್ನು ಹಂಚುವ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ.

ಕೂಡಿಗೆ ಗ್ರಾಮ ಪಂಚಾಯತಿ ಮಾಸಿಕ ಸಭೆಯಲ್ಲಿ ನಿವೇಶನ ರಹಿತರ ಪಟ್ಟಿಮಾಡಿ ತಾಲೂಕು ಮಟ್ಟಕ್ಕೆ ಕಳುಹಿಸಲಾಗಿದೆ ವಿನಹ ಯಾವುದೆ ಪ್ರಕ್ರಿಯೆ ಪ್ರಾರಂಭವಾಗಿಲ್ಲ ನಿವೇಶನ ರಹಿತರು ದಿನಂಪ್ರತಿ ಗ್ರಾಮ ಪಂಚಾಯತಿ ಮತ್ತು ತಾಲೂಕು ಕೇಂದ್ರಗಳಿಗೆ ಅಲೆದಾಡುವಂತಾಗಿದೆ.

ಕಳೆದ ಐದು ವರ್ಷಗಳಿಂದ ಕೂಡಿಗೆ ಗ್ರಾಮ ಪಂಚಾಯಿತಿಯಿಂದ ನೂರಾರು ಜನರಿಗೆ ನಿವೇಶನ ನೀಡುವ ಸಲುವಾಗಿ ಎಲ್ಲಾ ಗ್ರಾಮ ಸಭೆಗಳಲ್ಲಿ ಅರ್ಜಿಯನ್ನು ಪಡೆಯಲಾಗಿದೆ ಅದರೆ ಅವರ ಅರ್ಜಿ ಗಳಿಗೆ ಇದುವರೆಗೂ ಉತ್ತರ ಬಂದಿಲ್ಲ. ಸಂಬಂಧಿಸಿದವರು ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹ ನಿವೇಶನ ರಹಿತರಿಗೆ ಜಾಗವನ್ನು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.