ಮಡಿಕೇರಿ, ಮೇ 15: ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿ, ಉಳ್ಳವರಿಗೆ ನೀರು, ಪಡಿತರದಲ್ಲಿ ಅವ್ಯವಹಾರ ವಾಗಿದೆ ಎಂದು ಗ್ರಾಮಸ್ಥರ ಆರೋಪ ನಿರಾಧಾರವಾಗಿದೆ ಎಂದು ಕಾನೂರು ಗ್ರಾ.ಪಂ. ಅಧ್ಯಕ್ಷೆ ಬಿ.ಸಿ. ಲತಾ ಕುಮಾರಿ, ಸದಸ್ಯೆ ಶಿಲ್ಪ ಅಪ್ಪಣ್ಣ ಸ್ಪಷ್ಟಪಡಿಸಿದ್ದಾರೆ.
ಬೆಕ್ಕೆಸೊಡ್ಲೂರು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸೇರಿರುವ ಅಂಗನವಾಡಿ ಅಳಿವು ಉಳಿವಿನ ಹಂತದಲ್ಲಿದೆ. ಕಳೆದ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಅಂಗನವಾಡಿಯ ಒಳಗೆ ನೀರು ನಿಂತಿತ್ತು. ಅಂಗನವಾಡಿಯಲ್ಲಿ ಶ್ರೀ ಮಹಾಪಾರ್ವತಿ ಸ್ತ್ರೀಶಕ್ತಿ, ಮಾತಾಯಿ ಸ್ತ್ರೀಶಕ್ತಿ ಮತ್ತು ನಿಮಿಷಾಂಬ ಸ್ವಸಹಾಯ ಸಂಘಗಳು ತಮ್ಮ ತಿಂಗಳ ಸಭೆಯನ್ನು ತಿಂಗಳಿಗೆ ಎರಡು ಬಾರಿಯಂತೆ ನಡೆಸುತ್ತಿದ್ದು, ಸಂಘದ ಚರ ಮತ್ತು ಸ್ಥಿರಾಸ್ತಿಗಳು ಈ ಅಂಗನವಾಡಿಯಲ್ಲೇ ಇದೆ. 3 ಧರ್ಮಸ್ಥಳ ಸಂಘಗಳು ಕೂಡ ಅಂಗನವಾಡಿಯಲ್ಲಿ ತಮ್ಮ ಸಭೆ ನಡೆಸುತ್ತಿದ್ದು, ಈ ಅಂಗನವಾಡಿಯಲ್ಲಿ 7-8 ಬುಡಕಟ್ಟು ಜನಾಂಗದ ಮಕ್ಕಳು ಪ್ರತಿದಿನವೂ ಹಾಜರಾಗುತ್ತಿದ್ದಾರೆ. ಅಂಗನವಾಡಿಯ ಕಾನೂರು, ಕೋತೂರು, ಬಲ್ಯಮುಂಡೂರು, ತೂಚಮಕೇರಿಯ ತಿಂಗಳ ಲೆಕ್ಕಾಚಾರದ ಸಭೆ, ಸರಕಾರದ ಪಲ್ಸ್ ಪೆÇೀಲಿಯೋ ಕಾರ್ಯಕ್ರಮ ಇದೇ ಅಂಗನವಾಡಿಯಲ್ಲಿ ನಡೆಯುತ್ತಿದೆ. ಅಂಗನವಾಡಿಯ ಮುಂಜಾಗರುಕತೆ ಸ್ಥಳೀಯ ಸದಸ್ಯರದ್ದೇ ಆಗಿದ್ದು, ಮುಂದಿನ ಮಳೆಗಾಲದಲ್ಲಿ ಸರಕಾರದ ಆಸ್ತಿಯಾಗಿರುವ ಅಂಗನವಾಡಿಯ ಉಳಿವಿಗಾಗಿ, ಕೇಂದ್ರ ಸರಕಾರ ಸೂಚಿಸಿರುವ ನಿಯಮದಡಿಯಲ್ಲಿ ಮಳೆನೀರು ಮತ್ತು ಚರಂಡಿ ಯೋಜನೆಯಡಿ ಬಂದಿರುವ ಸಮುದಾಯ ಆಸ್ತಿಯ ಹಣವನ್ನು ಈ ಚರಂಡಿಗೆ ಉಪಯೋಗಿಸಿರುತ್ತೇವೆ. ಸರಕಾರದಿಂದ ಸೂಚಿಸಿರುವ ನಿಯಮಕ್ಕೆ ಅನುಗುಣವಾಗಿಯೇ ಪಂಚಾಯಿತಿ ವತಿಯಿಂದ ಇಲ್ಲಿ ಯವರೆಗೆ ಪ್ರತಿಯೊಂದು ಕಾಮಗಾರಿಯು ನಡೆದಿರುತ್ತದೆ.
ಚರಂಡಿ ಕೆಲಸ ಮಾಡಿಕೊಡ ಬೇಕಾಗಿ ಸೂಚಿಸಿದ್ದು, ಕಾಮಗಾರಿ ಯನ್ನು ಉದ್ಯೋಗ ಖಾತ್ರಿಯಡಿ ಸೇರಿಸಲಾಗಿದೆ. ಬೆಕ್ಕೆಸೊಡ್ಲೂರು ಗ್ರಾಮಕ್ಕೆ ಪಂಚಾಯಿತಿ ವತಿಯಿಂದ ಶಾಲೆಗಳಿಗೆ ಮತ್ತು ಕಾವೇರಿ ಕಾಲೋನಿಯವರಿಗೆ ಮಾತ್ರ ನೀರಿನ ಸರಬರಾಜು ಇರುತ್ತದೆ. ಉದ್ಯೋಗ ಖಾತ್ರಿಯಡಿಯಲ್ಲಿ ಕಳೆದ ವರ್ಷವೇ ತೀತಮಾಡ ಕುಟುಂಬಸ್ಥರಿಗೆ ತೆರೆದ ಬಾವಿ ಅನುಮೋದನೆಗೊಂಡಿದ್ದು ಕಾಮಗಾರಿಯನ್ನು ಮಾಡಿಕೊಳ್ಳದೆ ವಿನಾಕಾರಣ ಆರೋಪ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.