ಮಡಿಕೇರಿ, ಮೇ 15: ದೇಶಾದ್ಯಂತ ಲಾಕ್ಡೌನ್ ಆರಂಭವಾದಾಗಿನಿಂದಲೂ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದು ಸಹಜ. ಇತ್ತೀಚೆಗೆ ಲಾಕ್ಡೌನ್ 2,3... ಎಂದು ಹೇಳುತ್ತಾ ದಿನೇ ದಿನೇ ಲಾಕ್ಡೌನ್ ನಿಯಮಗಳು ಸಡಿಲಿಕೆಯಾಗುತ್ತಿವೆ. ರಸ್ತೆಗಳಲ್ಲಿ ವಾಹನಗಳು ಎಂದಿನಂತೆ ಓಡಾಡಲು ಪ್ರಾರಂಭಿಸಿವೆ. ಇಷ್ಟು ದಿನ ಆರಾಮವಾಗಿ ರಸ್ತೆಗಳಲ್ಲಿ ಬಿಸಿಲು ಕಾಯುತ್ತಿದ್ದ ದನಗಳು, ನಾಯಿಗಳಿಗೆ ಇದೀಗ ರಸ್ತೆಯಲ್ಲಿ ಓಡಾಡುವ ಕೆಲ ವಾಹನಗಳು ಮಾರಕವಾಗುತ್ತಿವೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ...
ತಾ. 13 ರ ರಾತ್ರಿ ಸುಮಾರು 7:30 ಕ್ಕೆ ನಗರದ ಕಾನ್ವೆಂಟ್ ಜಂಕ್ಷÀನ್ ಬಳಿ ‘ಮಹೀಂದ್ರ ಮಾರ್ಷಲ್’ (ನೀಲಿ ಬಣ್ಣ) ಜೀಪನ್ನು ಮದ್ಯವ್ಯಸನಿಯೋರ್ವ ಅಜಾಗರುಕತೆಯಿಂದ ಚಲಾಯಿಸಿ ನಾಯಿಮರಿಯ ಮೇಲೆ ಹರಿಸಿ ಪ್ರಾಣತೆಗೆದ.
ನಾನು ಕಚೇರಿಯಿಂದ ಹಿಂತಿರುಗುವಾಗ, ಕಾನ್ವೆಂಟ್ ಜಂಕ್ಷನ್ ಬಳಿ ಇರುವ ಕೆನರಾ ಬ್ಯಾಂಕ್ನಿಂದ, ಜಂಕ್ಷನ್ವರೆಗೆ 10-12 ನಾಯಿಗಳು ಜೋರಾಗಿ ಕೂಗುತ್ತಿದ್ದನ್ನು ಕೇಳಿ ಒಮ್ಮೆಲೆ ಹೆದರಿಕೆಯಾಯಿತು. ಜಂಕ್ಷನ್ನಲ್ಲಿ ಮದ್ಯವ್ಯಸನಿಯ ಜೀಪ್ ಸ್ಥಳದಲ್ಲಿ ನಿಂತಿತ್ತು. ನಿಲ್ಲಲೂ ಶಕ್ತಿಯಿಲ್ಲದೆ ತೂರಾಡುತ್ತಿದ್ದ ಆ ವ್ಯಕ್ತಿಗೆ ನನಗೆ ಪರಿಚಯವಿದ್ದ ಯುವತಿ ಬಯ್ಯುತ್ತಿದ್ದದ್ದು ಕಂಡುಬಂತು. ಆದರೆ ಸ್ಥಳದಲ್ಲೇ ನಿಂತಿದ್ದ ಕೆಲವರು, ಸತ್ತು ಬಿದ್ದಿದ್ದ ನಾಯಿಯ ಬಳಿ ಆಗಲಿ, ಒಂಟಿಯಾಗಿ ಮದ್ಯವ್ಯಸನಿಯೊಂದಿಗೆ ಆತನ ತಪ್ಪಿನ ಬಗ್ಗೆ ಜಗಳವಾಗುತ್ತಿದ್ದ ಯುವತಿಯ ಬಳಿಯಾಗಲಿ ಯಾರೂ ಬರಲಿಲ್ಲ. ನಾನು ಸ್ಥಳಕ್ಕೆ ತೆರಳಿದ ಕೂಡಲೇ ಆ ಮದ್ಯವ್ಯಸನಿ ತನ್ನ ಜೀಪನ್ನೇರಿ ಪರಾರಿಯಾಗಿದ್ದ. ಸ್ಥಳದಲ್ಲೇ ಇದ್ದ ಕೆಲವರು, ನನಗೆ ಪರಿಚಯವಿದ್ದವರು ನನ್ನ ಬಳಿ ಬಂದು ವಾಹನ ಸವಾರನ ಹೆಸರು, ಮನೆಯ ವಿಳಾಸ ಹೇಳಿದರು. ಅಷ್ಟು ಹೊತ್ತು ಸುಮ್ಮನೆ ನಿಂತು ನೋಡುತ್ತಿದ್ದವರಿಗೆ ತಕ್ಷಣವೇ ಎಲ್ಲಿಲ್ಲದ ಕಾಳಜಿ ತೋರಿಸುವ ಬುದ್ಧಿ ಬಂದದ್ದನ್ನು ಕಂಡು ಆಶ್ಚರ್ಯವಾಯಿತು. ನಾಯಿಯ ಮೇಲೆ ಆ ಮದ್ಯವ್ಯಸನಿ ಜೀಪನ್ನು 2,3 ಬಾರಿ ಹತ್ತಿಸಿದ್ದಾಗಿಯೂ ತಿಳಿಸಿದರು. ಹಾಗಾದರೆ ಆತ ಈ ರೀತಿ ಮಾಡುವಾಗ ಇವರೇನು ಮಾಡುತ್ತಿದ್ದರು...?
ನನ್ನ ವಾಹನ ತೆಗೆದುಕೊಂಡು ಮದ್ಯವ್ಯಸನಿಯ ಜೀಪನ್ನು ಹಿಂಬಾಲಿಸಲು ಪ್ರಯತ್ನಿಸಿ ವಿಫಲನಾದೆ. ವಾಹನದ ನೋಂದಣಿ ಸಂಖ್ಯೆ, ಚಾಲಕನ ಹೆಸರು ತಿಳಿದಿದ್ದರೂ ಪೊಲೀಸ್ ದೂರು ದಾಖಲಾಗದ ಕಾರಣ ಅದನ್ನು ಇಲ್ಲಿ ಪ್ರಕಟಿಸುತ್ತಿಲ್ಲ. ವಾಹನವನ್ನು ಹಿಡಿಯಲು ವಿಫಲನಾದ ಕಾರಣ, ಘಟನಾ ಸ್ಥಳಕ್ಕೆ ಹಿಂತಿರುಗಿದೆ. ಆಗ ಆ ಯುವತಿ ಹಾಗೂ ಇನ್ನೊಬ್ಬ ಸ್ನೇಹಿತ ನಾಯಿಯ ಅಂತ್ಯಕ್ರಿಯೆಗೆ ಸಮೀಪದಲ್ಲಿ ಗುಂಡಿ ತೋಡುತ್ತಿದ್ದರು. ಸ್ಥಳದಲ್ಲಿದ್ದ ಕೆಲವು ಮಂದಿ ಮಾನವೀಯತೆ ಮರೆತು ತಮಗೆ ಏನೂ ಸಂಬಂಧವಿಲ್ಲ ಎಂಬಂತೆ ಎಲ್ಲವನ್ನೂ ನೋಡುತ್ತಾ ನಿಂತಿದ್ದರು. ರಸ್ತೆಯ ಬಳಿಯೇ ಇದ್ದ ಸಮಾಜಸೇವಕರೆನಿಸಿಕೊಂಡ ಕೆಲವರು ಕೂಡ ಯಾವುದೇ ಸ್ಪಂದನ ನೀಡದೆ ಮೌನವಾಗಿ ನಿಂತಿದ್ದರು. ಮದ್ಯವ್ಯಸನಿ ಮದ್ಯದ ಅಮಲಿನಲ್ಲಿ ಒಂದು ಜೀವ ತೆಗೆದ. ಆದರೆ ಪ್ರಜ್ಞೆ ಇದ್ದ ಮಂದಿ ಆ ಘಟನೆಯನ್ನು ಕಂಡರೂ ಕಾಣದಂತೆ ಕೈಕಟ್ಟಿನಿಂತಿದ್ದನ್ನು ಕಂಡಾಗ ಕೊರೊನಾ ಕೂಡಾ ಮನುಷ್ಯರಿಗೆ ಮಾನವೀಯತೆ ಕಲಿಸಿಲ್ಲವೇ ಎಂದು ವ್ಯಥೆಯಾಯಿತು.
- ಪ್ರಾಣಿಪ್ರಿಯ