ಮಡಿಕೇರಿ, ಮೇ 15: ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾ ಶ್ರಮದಿಂದ ಇಂದು ಭಾಗಮಂಡಲ ಹಾಗೂ ತಲಕಾವೇರಿ ಯ ಅರ್ಚಕರು ಮತ್ತು ಸಿಬ್ಬಂದಿಯ 30ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭ ತಲಕಾವೇರಿ ಕ್ಷೇತ್ರದ ಹಿರಿಯ ಅರ್ಚಕ ಟಿ.ಎಸ್. ನಾರಾಯಣಚಾರ್ ಹಾಗೂ ಭಾಗಮಂಡಲ ಸನ್ನಿಧಿಯ ಹರೀಶ್‍ಭಟ್ ನೇತೃತ್ವದಲ್ಲಿ ಆಶ್ರಮ ಅಧ್ಯಕ್ಷರಾದ ಶ್ರೀ ಬೋಧ ಸ್ವರೂಪಾನಂದ ಮಹಾರಾಜ್ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.
ಕ್ಷೇತ್ರದಲ್ಲಿ ಈ ಕೊರೊನಾ ಭೀತಿಯ ನಡುವೆ ವೇದ ಪಾರಾಯಣದೊಂದಿಗೆ ದೈವಿಕ ಕೈಂಕರ್ಯಗಳನ್ನು ಶ್ರದ್ಧೆಯಿಂದ ನಡೆಸಬೇಕೆಂದು ಸ್ವಾಮೀಜಿ ಆಶಿಸಿದರು. ಬಳಿಕ ಉಡೋತ್‍ಮೊಟ್ಟೆಯ 90 ಕಾರ್ಮಿಕ ಕುಟುಂಬಗಳು ಹಾಗೂ ಮಡಿಕೇರಿಯ ನೂರಕ್ಕೂ ಅಧಿಕ ಖಾಸಗಿ ಬಸ್ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು.
ಗಾಂಧಿ ಮೈದಾನದಲ್ಲಿ ಜರುಗಿದ ಉಚಿತ ಆಹಾರ ಕಿಟ್ ವಿತರಣೆ ಸಂದರ್ಭ ಆಶ್ರಮದ ಶ್ರೀ ಗೋಪೇಂದ್ರ ನಂದ ಮಹಾರಾಜ್, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಕೃಷಿ ಉಪನಿರ್ದೇಶಕ ರಾಜು, ಪತ್ರಿಕಾ ಬಳಗದ ಕೇಶವ ಕಾಮತ್, ಚಂದನ್ ಕಾಮತ್, ಗಾಳಿಬೀಡು ಗ್ರಾ.ಪಂ. ಸದಸ್ಯ ಧನಂಜಯ್, ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಭರತ್, ಸಲೀಂ, ನಾಗೇಂದ್ರ ಮೊದಲಾದವರು ಪಾಲ್ಗೊಂಡಿದ್ದರು.