ಗೋಣಿಕೊಪ್ಪಲು, ಮೇ 15: ಏಪ್ರಿಲ್, ಮೇ ತಿಂಗಳು ಬಂತೆಂದರೆ ಗ್ರಾಮ ಗ್ರಾಮಗಳಲ್ಲಿರುವ ದೇವಾಲಯಗಳು ಸುಣ್ಣ ಬಣ್ಣ ಬಳಿಯಲ್ಪಟ್ಟು ತಳಿರು ತೋರಣಗಳಿಂದ ಸಿಂಗರಿಸಿಕೊಂಡು ಕಂಗೊಳಿಸುತ್ತವೆ. ಊರ ಹಬ್ಬಕ್ಕೆ ಪರ ಊರಿನಲ್ಲಿ ನೆಲೆಸಿರುವವರು ಬಂದು ಸೇರುತ್ತಾರೆ. ಹಬ್ಬವನ್ನು ಸಾಂಪ್ರದಾಯಿ ಕವಾಗಿ ನಡೆಸುವ ಮೂಲಕ ಹಿರಿಯರು ತೋರಿಸಿಕೊಟ್ಟಿರುವ ಪದ್ಧತಿ ಪರಂಪರೆಗಳನ್ನು ಚಾಚು ತಪ್ಪದೆ ಪಾಲಿಸಲಾಗುತ್ತದೆ. ಇದೀಗ ಕೊರೊನಾ ಮಹಾಮಾರಿಯಿಂದ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಯಾವುದೇ ದೇವರ ಕಾರ್ಯಗಳು ನಡೆಯದೆ ಇರುವುದರಿಂದ ಇದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.ಮಡಿಕೆ, ಕುಡಿಕೆಗಳನ್ನೇ ವೃತ್ತಿ ಬದುಕಾಗಿ ಕಂಡುಕೊಂಡಿದ್ದ ಹಲವು ಹಿರಿಯ ಜೀವಗಳಿಗೆ ಇದೀಗ ಕೊರೊನಾ ಕರಿನೆರಳು ಬಾಧಿಸ ತೊಡಗಿವೆ. ಕೇವಲ ಮಡಿಕೆ, ಕುಡಿಕೆಗಳನ್ನಲ್ಲದೆ ದೇವರ ಕಾರ್ಯಕ್ಕೆ ಬಳಸುವ ವಿವಿಧ ರೀತಿಯ ಆಕಾರ ಗಳಿಗೆ ಇದೀಗ ಬೆಲೆ ಇಲ್ಲದಂತಾಗಿದೆ. ವಾರ್ಷಿಕವಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ವಿಶೇಷವಾಗಿ ದ.ಕೊಡಗಿನ ಅಯ್ಯಪ್ಪ, ಭದ್ರಕಾಳಿ ದೇವಾಲಯಗಳಲ್ಲಿ ನಡೆಯುವ ವಾರ್ಷಿಕ ಹಬ್ಬಗಳಿಗೆ ಈ ಕುಟುಂಬಗಳೆ ದೇವರ ಕಾರ್ಯಗಳಿಗೆ ಬೇಕಾದ ಆಕಾರಗಳನ್ನು ತಯಾರಿಸಿ ನಿಗಧಿತ ಸಮಯದಲ್ಲಿ ದೇವಾಲಯ ಗಳಿಗೆ ನೀಡುತ್ತಿದ್ದವು. ದೇವಾಲಯ ಸಮಿತಿಯ ಪದಾಧಿಕಾರಿಗಳು ಇವುಗಳನ್ನು ತಮ್ಮ ದೇವಾಲಯಗಳಿಗೆ ಶಾಸ್ತ್ರೋಕ್ತವಾಗಿ ಕೊಂಡೊಯ್ಯುತ್ತಿ ದ್ದರು. ತಯಾರಿಸಿದ ವಿವಿಧ ಬಗೆಯ ಆಕೃತಿಗಳಿಗೆ ದೇವಾಲಯ ಸಮಿತಿ ನೀಡುವ ಹಣದಿಂದ ಇವರ ಬದುಕಿಗೆ ಅನುಕೂಲವಾಗುತ್ತಿತ್ತು.

ಆದರೆ ಈ ಬಾರಿ ಕೊರೊನಾ ಮಹಾಮಾರಿಯಿಂದ ಇಡೀ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಗಳು ಬುಡಮೇಲಾಗಿ ಇವರ ವೃತ್ತಿ ಬದುಕಿಗೂ ಸಂಚಕಾರ ಬಂದಿದೆ.

ದ.ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕೆ ಬೀಡುವಿನಲ್ಲಿ ಅಕ್ಕಯ್ಯಮ್ಮ, ಲಕ್ಷ್ಮಮ್ಮ, ದೇವಮ್ಮ, ಅವ್ವಿಯಮ್ಮ, ಯಶೋದಮ್ಮ, ಸಂಕೇತ್, ಚನ್ನಮ್ಮ, ಸೀನಾ, ಕಾಳಮ್ಮ, ಕಮಲ, ಜಯಶ್ರೀ, ಕೆ.ಪಿ. ನಾಗು, ತಿಮ್ಮಯ್ಯಶೆಟ್ಟಿ ಹಾಗೂ ರತ್ನಮ್ಮ ಎಂಬ ಕುಟುಂಬಗಳು ಪುರಾತನ ಕಾಲದಿಂದಲೂ ದೇವರ ಕಾರ್ಯಕ್ಕೆ

(ಮೊದಲ ಪುಟದಿಂದ) ಬೇಕಾದ ವಿವಿಧ ಆಕಾರಗಳನ್ನು ಮಾಡುತ್ತಲೇ ಬಂದಿವೆ. ಸಾಂಪ್ರದಾಯಿಕವಾಗಿ ತಯಾರಿಸುವ ಆಕಾರಗಳನ್ನು ಶಾಸ್ತ್ರೋಕ್ತವಾಗಿ ನಿಗದಿತ ನಿಯಮಗಳನ್ನು ಅಳವಡಿಸಿ ಕೊಂಡು ಒಂದೊಂದು ಕುಟುಂಬಗಳು ಒಂದೊಂದು ದೇವಾಲಯ ಗಳಿಗೆ ತಯಾರಿಸಿದ ವಸ್ತುಗಳನ್ನು ನೀಡುತ್ತಾ ಬರುತ್ತಿವೆ. ದೇವರ ಹಬ್ಬದ ಸಮಯದಲ್ಲಿ ಆಯಾಯ ಸಮಿತಿಯು ನೀಡುವ ಸಹಾಯವನ್ನು ಸ್ವೀಕರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಇವರು ತಯಾರಿಸಿದ ಆಕೃತಿಗಳನ್ನು ದೇವಾಲಯಗಳಲ್ಲಿ ಇಟ್ಟು ಪೂಜಿಸುತ್ತ ಬಂದಿರುವ ಪದ್ದತಿಯು ಇಂದಿಗೂ ಮುಂದುವರೆಯುತ್ತಿದೆ.

ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ಈ ಬಾರಿ ಯಾವುದೇ ದೇವಾಲಯಗಳು ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಯಾವುದೇ ಪೂಜಾ ಕಾರ್ಯಗಳು, ಹಬ್ಬ ಹರಿದಿನಗಳು ನಡೆಯಲಿಲ್ಲ. ಇದರಿಂದಾಗಿ ಈ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ.

ಮಡಿಯುಟ್ಟು ನಾಲ್ಕು ಕಿ.ಮೀ. ದೂರದ ಮಣ್ಣುಗುಂಡಿ ಪ್ರದೇಶಕ್ಕೆ ನಡೆದುಕೊಂಡೇ ತೆರಳುವ ಈ ಕುಟುಂಬದವರು ಅಲ್ಲಿರುವ ಜೇಡಿ ಮಣ್ಣನ್ನು ಸಂಗ್ರಹಿಸಿ ಬಿಸಿಲಿನ ತಾಪವನ್ನು ಲೆಕ್ಕಿಸದೆ ತಲೆಮೇಲೆ ಹೊತ್ತು ತಂದು ದೇವಾಲಯಗಳಿಗೆ ಬೇಕಾದ ವಸ್ತುಗಳನ್ನು ತಯಾರಿಸು ತ್ತಾರೆ.

ಹೆಬ್ಬಾಲೆ, ಕಾಡ್ಲಯ್ಯಪ್ಪ ದೇವಾಲಯ, ಮಾಯಮುಡಿ ಭದ್ರಕಾಳಿ, ಕಿರುಗೂರು, ಬೀಟ್‍ವಾಡ, ನಲ್ಲೂರು ಹುದಿಕೇರಿ, ನಡಿಕೇರಿ, ಬಾಳಾಜಿ, ತೂಚಮಕೇರಿ, ಹರಿಹರ, ಬೆಸಗೂರು, ಬೇಗೂರು ಸೇರಿದಂತೆ ಇನ್ನಿತರ ದೇವಾಲಯಗಳಿಗೆ ಬೇಕಾದ ಮಣ್ಣಿನ ಆಕಾರದ ಮೂರ್ತಿಗಳನ್ನು ನೀಡುತ್ತ ಬಂದಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ದೇವಾಲಯಗಳಿಗೆ ಬೇಕಾದ ವಿವಿಧ ಆಕೃತಿಗಳನ್ನು ತಯಾರಿಸಿ ಇನ್ನೇನು ದೇವಾಲಯಗಳಿಗೆ ನೀಡಬೇಕು ಅನ್ನುವಷ್ಟರಲ್ಲಿ ದೇಶದಲ್ಲೆಡೆ ಕೊರೊನಾ ಆವರಿಸಿದ ಹಿನ್ನೆಲೆಯಲ್ಲಿ ಇವರು ತಯಾರಿಸಿಟ್ಟಿದ್ದ ಆಕಾರಗಳು ಮೂಲೆ ಸೇರಿವೆ. ಪ್ರಸ್ತುತ ಕಷ್ಟದಲ್ಲಿರುವ ಈ ಸಮುದಾಯದ ಕುಟುಂಬಗಳಿಗೆ ದೇವಸ್ಥಾನ ಸಮಿತಿಗಳು, ಜಿಲ್ಲಾಡಳಿತ ಸಹಾಯ ಹಸ್ತ ನೀಡಲು ಮುಂದೆ ಬರಬೇಕಾಗಿದೆ.

-ಹೆಚ್.ಕೆ. ಜಗದೀಶ್