ಕಣಿವೆ, ಮೇ 15: ಆಡಂಬರದ ವಿವಾಹ ಕಾರ್ಯಕ್ರಮಗಳಿಗೆ ಕೊರೊನಾ ಎಂಬ ಮಹಾಮಾರಿ ಇದೀಗ ಕಡಿವಾಣ ಹಾಕಿದೆ. ಹಿಂದಿನ ಕಾಲವನ್ನು ನೆನಪಿಸುವ ಮನೆಯಂಗಳದ ಸರಳ ವಿವಾಹಗಳಿಗೆ ಜನರನ್ನು ಪ್ರಕೃತಿಯೇ ಪ್ರೇರೇಪಿಸಿದೆ. ಸರ್ಕಾರ ಲಾಕ್‍ಡೌನ್ ಹೆಸರಲ್ಲಿ ವಿವಾಹ ಕಾರ್ಯಕ್ರಮಗಳಿಗೆ ಗರಿಷ್ಠ 50 ಮಂದಿ ಮಾತ್ರ ಸೇರುವಂತೆ ಷರತ್ತು ವಿಧಿಸಿದೆ. ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಮನೆಯಂಗಳದಲ್ಲಿ ನಡೆಯುತ್ತಿದ್ದ ಚಪ್ಪರದ ಹಸಿರು ತೋರಣದಡಿಯ ಮದುವೆಗಳು, ಮದುವೆಯ ನೆಪದಲ್ಲಿ ಗ್ರಾಮದ ಮನೆ ಮನೆಗಳಿಗೆ ಬೆಸುಗೆಯಕೊಂಡಿಯಾಗಿದ್ದ ಆ ಸಂಬಂಧಗಳನ್ನು ನಗರ ಹಾಗೂ ಪಟ್ಟಣಗಳಲ್ಲಿನ ಕಲ್ಯಾಣ ಮಂಟಪಗಳು ನುಂಗಿ ಹಾಕಿದ್ದವು. ಅಲ್ಲಿ ಕೇವಲ ತೋರಿಕೆಯ ಕಾಲ್ಪನಿಕವಾದ ನಿರ್ಭಾವತೆ ಇತ್ತೇ ವಿನಃ ನೈಜವಾದ ಸಂಬಂಧಗಳ ಜಾಗ ಅದಾಗಿರಲಿಲ್ಲ.

ಕುಶಾಲನಗರದಲ್ಲಿ ಇತ್ತೀಚೆಗೆ ಒಂದು ವಿವಾಹ ಸಮಾರಂಭ ನಡೆಯಿತು. ಆ ವಿವಾಹದ ಆಮಂತ್ರಣ ಒಂದು ನೋಟ್‍ಬುಕ್‍ನಷ್ಟು ದಪ್ಪವಿತ್ತು. ಆ ಆಮಂತ್ರಣವನ್ನು ಬಂಧುಗಳಿಗೆ ಕೊಡುವಾಗ ಬೆಳ್ಳಿ ಬಟ್ಟಲಲ್ಲಿಟ್ಟು, ಅದರ ಜೊತೆ ಒಂದು ಸೀರೆ, ಅರಿಶಿನ ಕುಂಕುಮವನ್ನು ಕೊಟ್ಟು ಆಹ್ವಾನಿಸಲಾಗಿತ್ತು. ಮದುವೆಯ ಆಮಂತ್ರಣ ಪತ್ರಿಕೆಯೇ ಇಷ್ಟೊಂದು ಭರ್ಜರಿ ಇದೆಯಲ್ಲ, ಇನ್ನು ಮದುವೆ ಮಂಟಪ ಇನ್ನೆಷ್ಟು ಅದ್ಧೂರಿಯಾಗಿ ಇರುತ್ತೆ ಎಂಬ ಪ್ರಶ್ನೆ ನನ್ನದಾಗಿತ್ತು. ಇತ್ತೀಚಿನ ಮದುವೆಗಳು ಆಡಂಬರದ ಉತ್ಸವಗಳೇ ಸರಿ ಎನ್ನುವಷ್ಟರಮಟ್ಟಿಗೆ ಮದುವೆ ಸಿದ್ಧತೆ ನಡೆದಿತ್ತು. ಅಂದರೆ ಮದುವೆ ಮಂಟಪಕ್ಕೆ ಬಂದಿಳಿವ ಮಂದಿಗೆ ಎಳನೀರು ಪಾನೀಯದ ಸ್ವಾಗತ, ಬಗೆ ಬಗೆಯ ಚಾಟ್ಸ್ ಅಂಗಡಿಗಳು, ಕಬ್ಬಿನ ಜ್ಯೂಸ್ ಅಂಗಡಿ ಅಲ್ಲಿದ್ದವರಿಗೆ ಬೇಕೆನಿಸಿದ ಚಾಟ್ಸ್ ಅಂಗಡಿಗಳನ್ನು ದಾಟಿಯೇ ಮಂಟಪದೊಳಕ್ಕೆ ಕಾಲಿಡಬೇಕಿತ್ತು. ನಂತರ ವಿಭಿನ್ನ ಮಳಿಗೆಗಳ ಸುತ್ತಲೂ ಒಂದು ಸುತ್ತು ಬಂದಾಗ ಹೋದವರ ಮೇಲೆ ಪನ್ನೀರು ಹಾಕಿ ಅರಿಶಿಣ ಕುಂಕುಮ ಹಚ್ಚಲಾಯಿತು. ಇನ್ನು ಸಭಾಂಗಣದ ಅಲಂಕಾರದ ಬಗ್ಗೆ ಹೇಳಬೇಕಿಲ್ಲ.

ಯಾವುದು ಪ್ಲಾಸ್ಟಿಕ್ ಹೂವು, ಯಾವುದು ಸ್ವಾಭಾವಿಕ ಹೂವು ಹಾಗೂ ಎಷ್ಟು ಬಗೆಯ ಪ್ಲಾಸ್ಟಿಕ್ ಸೌಂದರ್ಯ ಸಾಧನಗಳನ್ನು ಅಲ್ಲಿ ಜೋಡಿಸಲಾಗಿದೆ ಎಂದು ಲೆಕ್ಕ ಹಾಕುವುದೇ ಕಷ್ಟವಾಗಿತ್ತು. ಹುಡುಗಿಯ ತಂದೆ ಅದೆಷ್ಟು ಜನ್ಮಕ್ಕಾಗುವಷ್ಟು ಹಣವನ್ನು ಕೂಡಿಸಿಟ್ಟಿದ್ದರೋ ಏನೋ, ಅದರ ಒಂದು ಸ್ಯಾಂಪಲ್ ಅಲ್ಲಿ ಪ್ರದರ್ಶಿತವಾಗಿತ್ತು. ಆನೆ, ಕುದುರೆಗಳ ಮೂರ್ತಿಗಳು, ಗಣಪತಿಯ ತರಹೇವಾರಿ ವಿಗ್ರಹಗಳು, ಆರ್ಕೆಸ್ಟ್ರಾ, ಕೂಗಾಟ, ಕಿರುಚಾಟ ಹೀಗೆ ಯಾವುದಿತ್ತು ಯಾವುದಿಲ್ಲ ಎಂಬುದನ್ನು ಹೇಳಲಾಗದಂತೆ ಆ ಮದುವೆ ಏರ್ಪಾಟಿತ್ತು. ಮಧು ಮಗಳು ಹಾಗೂ ಮಧು ಮಗನನ್ನು ಮದುವೆ ಮಂಟಪಕ್ಕೆ ಕರೆತರಲು ರೂಪಿಸಿದ್ದ ಸಾರೋಟು ರಾಜಮನೆತನದ ವಿವಾಹವೋ ಎಂಬಂತೆ ಭಾಸವಾಗುತ್ತಿತ್ತು. ಇನ್ನು ಅಲ್ಲಿನ ಮಹಿಳೆಯರ ಮೈ ಮೇಲಿದ್ದ ಬಂಗಾರದ ಮಾದರಿಗಳಂತು ಆದಾಯ ತೆರಿಗೆ ಅಧಿಕಾರಿ ಗಳನ್ನು ಬೆಚ್ಚಿ ಬೀಳಿಸುವಂತಿತ್ತು. ಒಂದರ್ಥದಲ್ಲಿ ಅದೇನು ಮದುವೆಯೋ, ಮದುವೆಯ ಹೆಸರಿನಲ್ಲಿ ಮನೆತನದ ಸಂಪತ್ತಿನ ಪ್ರದರ್ಶನವೇ ಅಲ್ಲಿ ನಡೆದಿದ್ದ ಹಾಗಿತ್ತು. ಇನ್ನು ವಧು-ವರರು ರಂಗಸ್ಥಳದ ಎರಡು ಕಡೆಗಳಿಂದ ಪಾತ್ರಧಾರಿಗಳ ಹಾಗೆ ಡಾನ್ಸ್ ಮಾಡುತ್ತಾ ಹಸೆ ಮಣೆ ಏರಿದ್ದರು. ವೇದಿಕೆ ಮೇಲೆ ಪುರೋಹಿತರನ್ನು ಪಕ್ಕಕ್ಕೇ ತಳ್ಳುವಷ್ಟರ ಮಟ್ಟಿಗೆ ಜುಬ್ಬಾಧಾರಿಗಳು ಹಾಗೂ ಸ್ಯಾರಿ ನಾರಿಗಳಿದ್ದರು. ಮಧು ಮಂಟಪದ ಸುತ್ತ ನಾಟಕ ನೋಡಲೋ ಎಂಬಂತೆ ಕಿಕ್ಕಿರಿದಿದ್ದ ಬಂಧುಗಳು ಒಂದೆಡೆಯಾದರೆ ಅವರ ವಿಚಿತ್ರ ಕೇಕೆಗಳು -ಜೈಕಾರಗಳು ಮತ್ತೊಂದೆಡೆ ಮೇಳೈಸಿದ್ದವು. ವಧುವಿನ ಕಡೆಯವರು ಅವಳ ಹೆಸರು ಹೇಳಿಕೊಂಡು ಜೈಕಾರ ಕೂಗುತ್ತಿದ್ದರೆ, ವರನ ಕಡೆಯವರು ಅವನ ಹೆಸರು ಹೇಳಿ ಜೈಕಾರ ಕೂಗುತ್ತಿದ್ದರು. ರಿಯಾಲಿಟಿ ಶೋವೊಂದರ ಸ್ಪರ್ಧೆಗೆ ಬಂದಿಳಿದ ಸ್ಪರ್ಧಾಳುಗಳೇ ಮದು ಮಕ್ಕಳ ವೇಷತೊಟ್ಟಂತೆ ವರ್ತಿಸುತ್ತಿದ್ದ ಸಂದರ್ಭದಲ್ಲಿ ಮದುವೆಯ ವಿಧಿ ವಿಧಾನಗಳನ್ನು ನಡೆಸುತ್ತಿದ್ದ ಪುರೋಹಿತರ ಮುಖ ಕಳಾಹೀನವಾಗಿ ಅವರು ಹಣೆ ಚಚ್ಚಿಕೊಳ್ಳುತ್ತಾ ‘ಹೂಂ ನೀರು ಬಿಡ್ರಿ, ಅಕ್ಷತೆ ಹಾಕ್ರಿ, ತಾಳಿ ಕಟ್ರಿ, ಹಾರ ಬದಲಾಯಿಸ್ರಿ’ ಎಂದು ಯಾಂತ್ರಿಕವಾಗಿ ಮಂತ್ರ ಹೇಳುತ್ತಿದ್ದರು. ಹಾರ ಬದಲಾಯಿಸುವಾಗ ಹುಡುಗನನ್ನು ಆಗಸದೆತ್ತರಕ್ಕೆ ಎತ್ತಿ ಹಿಡಿಯಲಾಯಿತು. ಇನ್ನು ಹುಡುಗಿಯ ಕಡೆಯವರು ಕೂಡ ಘೋರವಾಗಿ ಎತ್ತಿ ಹಿಡಿದಾಗ ಅವಳ ಬಾಸಿಂಗವೇ ಕಳಚಿ ಬಿದ್ದಾಗ ವಧು - ವರರ ತಂದೆ ತಾಯಿ ಅಸಹಾಯಕರಾಗಿ ನಿಂತಿದ್ದರು. ಆಗ ಕೆರಳಿದ ಪುರೋಹಿತರು ಖಡಕ್ ದಾಟಿಯಲ್ಲೇ... ನಿಮಗೆ ಹುಡುಗಾಟಿಕೆ ಎಂದರೆ ನಮಗೇನು ತಲೆ ಕೆಟ್ಟಿಲ್ಲ. ಈ ಯಾವ ಹುಚ್ಚಾಟವೂ ಬೇಕಿಲ್ಲ. ಹುಡುಗ ನೆಲದ ಮೇಲೆ ನಿಂತು ಭೂಮಿಯನ್ನು ಸ್ಪರ್ಶಿಸಿ ಹಾರ ಹಾಕಿಸಿಕೊಳ್ಳಬೇಕು. ಪಾಣಿ ಗ್ರಹಣ ಮಾಡಬೇಕು. ಬೇಡ ಎಂದರೆ ನಾನು ಹೊರಟೆ, ಎಂದು ಗದರಿದಾಗ ಹುಚ್ಚು ಹುಚ್ಚಾದ ಕೇಕೆಗಳು ನಿಂತವು. ಮದುವೆ ಸಾಂಗವಾಗಿ ನಡೆಯಿತು. ಅಂದರೆ ನಾನು ಈ ವಿಚಾರ ಪ್ರಸ್ತಾಪ ಏಕೆ ಮಾಡಿದೆನೆಂದರೆ ನಮ್ಮ ಮದುವೆಗಳೇಕೆ ಹೀಗಾಗ ತೊಡಗಿವೆ. ಒಂದು ಗಂಡು ಒಂದು ಹೆಣ್ಣು ಬಾಳ ಪಥದಲ್ಲಿ ಕೈ ಕೈ ಹಿಡಿದು ಮುಂದೆ ಸಾಗುವ ಪವಿತ್ರ ಕಾರ್ಯಕ್ಕೆ ಸಾಕ್ಷಿಯಾಗುವಂತದ್ದೇ ಬಂಧುಗಳ ಕೆಲಸ. ಕರುಳ ಕುಡಿಯನ್ನು ಅಪರಿಚಿತರ ಮನೆಗೆ ಸೇರಿಸುವ ಆತಂಕದಲ್ಲಿರುವ ಹೆಣ್ಣಿನ ತಂದೆ ತಾಯಿಗಳು ದುಃಖವನ್ನು ಅದುಮಿಟ್ಟು ನಗುಮೊಗದಿಂದ ಬಂಧುಗಳನ್ನು, ಆಮಂತ್ರಿತರನ್ನು ಆದರಿಸಿ ಸತ್ಕರಿಸಿ ಕೃತಾರ್ಥರಾಗುವ ಶುಭಗಳಿಗೆಯಲ್ಲಿ ಏನೆಲ್ಲಾ ಹುಚ್ಚಾಟಗಳೇಕೆ? ಆಲಾಪಗಳೇಕೆ? ಮನುಷ್ಯನ ಸಂಪತ್ತು ಹೀಗೆ ಮಾಡಬಾರದ್ದೆಲ್ಲಾ ಮಾಡಿಸುತ್ತಿದೆಯಾ ಎಂದು ಅರೆ ಕ್ಷಣ ಅನಿಸಿತು. ಆವಾಗ ಆ ಮದುವೆ ಮಂಟಪದಲ್ಲಿದ್ದ ಪುರೋಹಿತರನ್ನೇ ನಾನು ಮಾತನಾಡಿಸಿದೆ. ಗುರುಗಳೇ ಹಿಂದಿನ ಕಾಲದ ಹಳ್ಳಿಯ ಮದುವೆಗಳಿಗೂ ಈ ಕಾಲದ ಹಣದ ಮದುವೆಗಳಿಗೂ ಏನನ್ನಿಸುತ್ತದೆ ಎಂದು. ಆಗ ಪುರೋಹಿತರು ಹೇಳಿದ್ದರು. ಹಳ್ಳಿಯ ಸಮಸ್ತ ಗ್ರಾಮಸ್ಥರ ಸಹಕಾರದಿಂದ ನಡೆಯುವ ಮದುವೆಗಳು ಈಗೆಲ್ಲಿಯ ಮಾತು ಎಂದಿದ್ದರು. ಈಗ ನನಗನಿಸುತ್ತಿದೆ ಕೊರೊನಾ ಎಂಬ ಪೆಡಂಭೂತ ಇಂತಹ ಮೋಜು, ಆವಾಜಿನ ಹುಚ್ಚಾಟದ ಮದುವೆಗಳಿಗೆ ಕತ್ತರಿ ಹಾಕಲೆಂದೇ ಬಂದಿತೆ. ಅದಕ್ಕಾಗಿಯೇ ಜನರನ್ನು ಈಗ ಸರಳವಾದ ಮನೆಯಂಗಳದ ಮದುವೆಗೆ ಕೊರೊನಾ ದೂಡಿದೆ ಎಂದೆನಿಸುತ್ತಿದೆ. ಕೆಲವು ವ್ಯಕ್ತಿಗಳು ಸಂಪಾದಿಸಿದ್ದ ಸಂಪತ್ತು ಅವರು ಮಾಡುವ ಆಡಂಬರದ ಮತ್ತು ವೈಭವದ ಮದುವೆ ಮನೆಗಳ ಎಂಜಲೆಲೆಗಳಲ್ಲಿ ಚೆಲ್ಲಾಡುತ್ತಿತ್ತು. ಈಗ ಕೊರೊನಾ ಎಲ್ಲವಕ್ಕೂ ಕತ್ತರಿ ಹಾಕಿದೆ. ಆಡಂಬರವೂ ಇಲ್ಲ. ಜನರಂತೂ ಸೇರುವಂತೆಯೇ ಇಲ್ಲ. ಕೆಲವು ಜನಸಾಮಾನ್ಯರು ಪೂರ್ವ ನಿಗದಿಯಾಗಿದ್ದ ತಮ್ಮ ಕುಟುಂಬಗಳ ಮದುವೆಗಳನ್ನು ಮಿತವ್ಯಯದಿಂದ ಮಾಡಿ ಮುಗಿಸುತ್ತಾ ಕೊರೊನಾಕ್ಕೆ ಧನ್ಯವಾದ ಹೇಳುತ್ತಿದ್ದಾರೆ.

- ಕೆ.ಎಸ್. ಮೂರ್ತಿ.