ಮಡಿಕೇರಿ, ಮೇ 14: ಕೊರೊನಾ ಮಹಾ ಮಾರಿ ಕಾಲಿಟ್ಟ ಘಳಿಗೆಯಲಿ ವಿಶ್ವವೇ ಸ್ಥಬ್ಧವಾಯಿತು.., ಹೆಣಗಳುರುಳಿದವು.., ಮುಂದೇನೆಂಬ ಭೀತಿಯೊಂದಿಗೆ ಇಡೀ ಜಗತ್ತೇ ಲಾಕ್ ಡೌನ್ ಎಂಬ ಬೀಗಮುದ್ರೆಯೊಂದಿಗೆ ಬಂದಿಯಾಯಿತು.., ಭಾರತವೂ ಇದರಲ್ಲಿ ಒಂದಾಯಿತು.., ಅಷ್ಟೇನೂ ಪರಿಣಮಿಸದಿದ್ದರೂ ನಮ್ಮ ಪುಟ್ಟ ಕೊಡಗು ಕೂಡ ಲಾಕ್ ಡೌನ್ ಆಯಿತು..., ಮುನ್ನೆಚ್ಚರಿಕೆಯ ಘಂಟೆಯೊಂದಿಗೆ...

ಆದರೂ.., ಜಿಲ್ಲಾಡಳಿತ ಜನತೆಯ ಅನುಕೂಲಕ್ಕಾಗಿ ವಾರದಲ್ಲಿ ಮೂರು ದಿನಗಳ ಕಾಲ ಸಡಿಲಿಕೆ ಮಾಡಿ ಅಗತ್ಯ ದಿನಸಿ, ತರಕಾರಿ, ಹಣ್ಣು ಹಂಪಲು ಖರೀದಿಗೆ ಅವಕಾಶ ಕಲ್ಪಿಸಿತ್ತು. ಮೂರು ದಿನಗಳ ಅವಕಾಶವಿದ್ದರೂ ಜನಗಳು ನೊಣಗಳಂತೆ ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಡಿಕೇರಿ ಮಾರುಕಟ್ಟೆಯಲ್ಲಿ ಜನ ಜಂಗುಳಿ, ವಾಹನ ದಟ್ಟಣೆ ಏರ್ಪಡುತಿದ್ದುದರಿಂದ ಜನರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ನಿಲ್ದಾಣ ಹಾಗೂ ಎಪಿಎಂಸಿ ಆವರಣದಲ್ಲಿ ಮಾರುಕಟ್ಟೆ ತೆರೆಯಲು ಅವಕಾಶ ಕಲ್ಪಿಸಲಾಯಿತು. ದುಬಾರಿ ಬೆಲೆಗೆ ತರಕಾರಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರೈತರ, ಗ್ರಾಹಕರ ನೆರವಿಗೆ ಬಂದ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ಪ್ರತಿ ಸಂತೆ ದಿನದಂದು ತರಕಾರಿ, ಹಣ್ಣುಗಳ ದರ ನಿಗದಿ ಮಾಡಿ ಮಾಹಿತಿ ನೀಡುತಿದ್ದು, ಅದರಂತೆ ವಹಿವಾಟು ಸಾಗುತಲಿತ್ತು.

ಜಿಲ್ಲಾಡಳಿತದ ಕಠಿಣ ನಿಯಮಗಳಿಂದಾಗಿ ಕೊಡಗು ಜಿಲ್ಲೆ ಹಸಿರು ವಲಯಕ್ಕೆ ಬರುತ್ತಿದ್ದಂತೆ ನಿಯಮ ಸಡಿಲಿಸಿದ ಜಿಲ್ಲಾಡಳಿತ ವಾರದ ಎಲ್ಲ ದಿನಗಳಲ್ಲೂ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿದೆ.

ವಾರದ ಎಲ್ಲ ದಿನಗಳಲ್ಲೂ ವಹಿವಾಟು ಇರುವದರಿಂದ ಇದೀಗ ಸಂತೆಯಲ್ಲಿ ವಹಿವಾಟು ಕುಂಟಿತವಾಗಿದೆ. ದಿನನಿತ್ಯ ವಹಿವಾಟು ಇರುವದರಿಂದ ಈ ಹಿಂದೆ ನಿಗದಿಯಾಗಿದ್ದ ವಾರದ ಮೂರು ದಿನಗಳ ಸಂತೆಯಲ್ಲಿ ಗ್ರಾಹಕರಿಲ್ಲದೆ ಬಿಕೋ ಎನ್ನುತಿದೆ.

ಜನರೇ ಇಲ್ಲ...: ನಿಯಮ ಸಡಿಲಿಕೆಯೊಂದಿಗೆ ಬಸ್ ಸಂಚಾರ ಆರಂಭಗೊಂಡಿದ್ದರಿಂದ ಸಾರಿಗೆ ಸಂಸ್ಥೆ ನಿಲ್ದಾಣದಲ್ಲಿ ಅವಕಾಶ ನೀಡಲಾಗಿದ್ದ ಸಂತೆಯನ್ನು ವೆಬ್ಸ್ ಬಳಿಯ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸ ಲಾಗಿದೆ. ಆದರೀಗ ಅಲ್ಲಿ ವ್ಯಾಪಾರಿಗಳು ಇದ್ದರೂ ಖರೀದಿಸುವವರಿಲ್ಲದಂತಾಗಿದೆ.

ಅಲ್ಲಿನ ವ್ಯಾಪಾರಿಗಳು ಹೇಳುವಂತೆ ನಗರದಲ್ಲಿ ಸುಮಾರು 80 ತರಕಾರಿ ಅಂಗಡಿಗಳಿವೆ, ಇದೀಗ ದಿನವಿಡೀ ತೆರೆದಿರುವದರಿಂದ ನಮಗಳಿಗೆ ವ್ಯಾಪಾರವಿಲ್ಲದಾಗಿದೆ, ನಾವುಗಳು ಚೇಂಬರ್ ಹಾಗೂ ಜಿಲ್ಲಾಡಳಿತ ನಿಗದಿ ಮಾಡಿರುವ ದರದಲ್ಲಿ ಕಡಿಮೆಯಾಗಿ ಕೊಡುತ್ತೇವೆ, ಚೌಕಾಸಿ ಮಾಡಿದಾಗ ಇನ್ನೂ ಕಡಿಮೆಗೆ ಕೊಡಬೇಕಾಗುತ್ತದೆ. ಆದರೆ ತರಕಾರಿ ಅಂಗಡಿಗಳಲ್ಲಿ ಅವರು ಹೇಳಿದ ದರ ಕೊಡಬೇಕಾಗುತ್ತದೆ ಎಂದು ಹೇಳುತ್ತಾರೆ.

ಖಾಲಿ ಖಾಲಿ...: ಇತ್ತ ಎಪಿಎಂಸಿ ಆವರಣವಂತೂ ವ್ಯಾಪಾರಿಗಳೇ ಇಲ್ಲದೆ ಬಣಗುಡುತ್ತಿದೆ. ಗ್ರಾಮೀಣ ಭಾಗದ ನಾಡು ತರಕಾರಿ ಬೆಳೆಯುವವರೂ ಸೇರಿದಂತೆ ಇತರ ವ್ಯಾಪಾರಿಗಳು ತೆರೆಯುತಿದ್ದ ಅಂಗಡಿಗಳು ಖಾಲಿ ಬಿದ್ದಿವೆ. ‘ಮನೆಲಿ ಕೂತು ಬೋರ್ ಆಗುತ್ತೆ ಸರ್, ಅಂಗಡಿ ಇದ್ದಾಗ ಒಂಚೂರು ಏನೋ ಆಗ್ತಿತ್ತು, ಈಗ ಏನೂ ಇಲ್ಲ, ಹಂಗಾಗಿ ಹೋಲ್‍ಸೇಲಲ್ಲಿ ಒಂದಿಷ್ಟ್ಟು ಈರುಳ್ಳಿ, ಆಲೂಗೆಡ್ಡೆ, ಟೊಮೆಟೊ ತಂದು ಇಟ್ಕೊಂಡಿದ್ದೀನಿ, ತಕೊಳಕ್ಕೆ ಜನ್ರೇ ಇಲ್ಲ ಸರ್..’ ಅಂತ ಎಪಿಎಂಸಿ ಎದುರು ರಸ್ತೆ ಬದಿ ಟೀ, ತಿಂಡಿ ಅಂಗಡಿ ಹಾಕಿಕೊಂಡು ಜೀವಿಸುತ್ತಿದ್ದ ಟಿ. ರಾಜು ಹೇಳುತ್ತಾರೆ.

ಒಂದಿಷ್ಟು ನಾಡು ತರಕಾರಿ...: ಹೊರಗಿನಿಂದ ಬರುವ ಬಯಲುಸೀಮೆಯ ತರಕಾರಿಗಳೊಂದಿಗೆ ಒಂದಿಷ್ಟು ಮಂದಿ ಸ್ಥಳೀಯ ರೈತರು ಬೆಳೆದ ನಾಡು ತರಕಾರಿಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬರುತ್ತಿದೆ. ಮಾರುಕಟ್ಟೆಯಲ್ಲಿ, ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲವರು ನಾಡು ತರಕಾರಿಯೊಂದಿಗೆ ಕುಳಿತಿರುತ್ತಾರೆ. ಆಸೆಯಿಂದ ಬರುವ ಗ್ರಾಹಕರು ತೀರಾ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಕೇಳುತ್ತಾರೆ., ನಾವೂ ಎಷ್ಟೊಂತ ಹೇಳೋದು ಅಂತ ಸ್ವಲ್ಪ ಕಡಿಮೆಗೆ ಕೊಟ್ಟು ಹೋಗ್ತೀವಿ, ಬೇರೆ ವ್ಯಾಪಾರಿಗಳು ಕೂಡ ನಮ್ಮಿಂದ ಕಡಿಮೆಗೆ ತಕೊಂಡು ಜಾಸ್ತಿಗೆ ಮಾರ್ತಾರೆ, ಏನ್ ಮಾಡೋದು ಸರ್..’ ಅಂತ ಹಳ್ಳಿ ರೈತರು ಹೇಳುತ್ತಾರೆ.

ಕೊಡಗು ಸೇವಾ ಕೇಂದ್ರದಿಂದ ಸೂರ್ಲಬ್ಬಿ ಮತ್ತಿತರ ಕಡೆಗಳಿಂದ ರೈತರಿಂದ ತಾಜಾ ತರಕಾರಿ ಖರೀದಿಸಿ ಕೊಡವ ಸಮಾಜದ ಆವರಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲಿಯೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.

‘ರಾಜಾಸೀಟ್ ಬಳಿ ಪಾನಿಪೂರಿ, ಚುರುಮುರಿ ಮಾರ್ಕೊಂಡು ಜೀವನ ಮಾಡ್ತಿದ್ವಿ.., ಕೊರೊನಾ ಬಂದು ಎಲ್ಲ ಕೊಚ್ಕೊಂಡೋಯ್ತು, ಬದುಕಿಗಾಗಿ ಈಗ ಪಿರಿಯಾಪಟ್ಣ, ಹುಣ್ಸೂರಿಂದ ತರಕಾರಿ ತಸ್ರ್ಕೊಂಡು ವ್ಯಾಪಾರ ಮಾಡ್ತಿದ್ದೀವಿ, ಅದ್ರಲ್ಲೂ ರೋಡ್ ಸೈಡ್ ಮಾರೋಕೂ ಬಿಡಲ್ಲ.., ವ್ಯಾಪಾರನೂ ಇಲ್ಲ..., ಬಾರೀ ಕಷÀ್ಟ ಆಗ್ತಿದೆ ಸರ್..’ ಅಂತ ಪೆÇೀಸ್ಟ್ ಆಫೀಸ್ ಎದುರು ತರಕಾರಿ ಮಾರುತ್ತಿದ್ದ ಪುಟಾಣಿನಗರದ ಲಕ್ಷ್ಮಿ ಮತ್ತೆ ಅವರ ಜೊತೆಗಾತಿ ಅವಲತ್ತುಕೊಂಡರು.

-ಕುಡೆಕಲ್ ಸಂತೋಷ್