* ಕೊಡ್ಲಿಪೇಟೆ, ಮೇ 14: ಪ್ರಗತಿಪರ ಚಿಂತಕ, ದಲಿತಪರ ಹೋರಾಟಗಾರ ಆನಂದ್ ತೇಲ್‍ತುಂಬ್ಡೆಯವರ ಬಂಧನವನ್ನು ಖಂಡಿಸಿ ಕೊಡ್ಲಿಪೇಟೆಯಲ್ಲಿ ದಲಿತಪರ ಸಂಘಟನೆಗಳ ಮುಖಂಡರು, ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಕೈಗೆ ಕಪ್ಪುಪಟ್ಟಿ ಧರಿಸಿ, ಮೌನವಾಗಿ ಪ್ರತಿಭಟನೆ ನಡೆಸಿದರು.

ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಆನಂದ್ ತೇಲ್‍ತುಂಬ್ಡೆ ಅವರ ಬಂಧನವನ್ನು ಖಂಡಿಸ ಲಾಯಿತು. ಕೇಂದ್ರದ ಬಿಜೆಪಿ ಸರ್ಕಾರವು ದುರುದ್ದೇಶದಿಂದ ಆನಂದ್ ಅವರನ್ನು ಬಂಧಿಸಿದೆ. ಕೊರೊನಾ ಸಂದರ್ಭದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದವರನ್ನು ಬಂಧಿಸುತ್ತಿಲ್ಲ, ಜೈಲಿನಲ್ಲಿ ಇರುವ ಹಲವಷ್ಟು ಖೈದಿಗಳನ್ನು ಬಿಡುಗಡೆ ಮಾಡುತ್ತಿದ್ದರೂ ಸಹ ಸುಳ್ಳು ಪ್ರಕರಣ ಹೂಡಿ ಆನಂದ್ ಅವರನ್ನು ಬಂಧಿಸಿರುವದು ಅಕ್ಷಮ್ಯ ಎಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೊಮ್ಮಗಳನ್ನು ಮದುವೆಯಾಗಿರುವ ಆನಂದ್ ತೇಲ್‍ತುಂಬ್ಡೆ ಅವರನ್ನು ಬಂಧಿಸಿ ಒಂದು ತಿಂಗಳಾದರರೂ ಬಿಡುಗಡೆಗೊಳಿಸದೇ ಇರುವದು ಖಂಡನೀಯ. ತಕ್ಷಣ ಅವರ ಮೇಲಿನ ಮೊಕದ್ದಮೆಯನ್ನು ವಾಪಸ್ ಪಡೆದು ಬಿಡುಗಡೆಗೊಳಿಸಬೇಕೆಂದು ಪ್ರಮುಖರಾದ ಜೆ.ಎಲ್. ಜನಾರ್ಧನ್ ಆಗ್ರಹಿಸಿದರು.

ಈ ಸಂದರ್ಭ ದಲಿತ ಸಂಘಟನೆಗಳ ಪ್ರಮುಖರಾದ ಕಾಳಯ್ಯ, ಸೋಮಣ್ಣ, ವೀರಭದ್ರ, ವಿಜಯ್, ವಸಂತ್, ಡಿ.ಎಸ್. ಇಂದ್ರೇಶ್, ಹೇಮಂತ್, ಜಯರಾಜ್, ಪ್ರಶಾಂತ್, ಮುರುಳಿ, ಅಶ್ವತ್, ಧ್ಯಾನ್, ಅಕ್ಷಯ್, ಮಣಿ ಸೇರಿದಂತೆ ಇತರರು ಭಾಗವಹಿಸಿದ್ದರು.