*ಗೋಣಿಕೊಪ್ಪಲು, ಮೇ 12: ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಿದ್ದು ಇವರನ್ನು ತಾಲೂಕಿನ ವಿವಿಧ ವಿದ್ಯಾರ್ಥಿ ನಿಲಯ ಹಾಗೂ ರೆಸಾರ್ಟ್‍ಗಳಲ್ಲಿ 14 ದಿನಗಳ ಕಾಲ ಕ್ವಾರೆಂಟೈನಲ್ಲಿ ಇಡಲಾಗಿದೆ.

ತಿತಿಮತಿಯಲ್ಲಿ ಒಂದು ಕ್ವಾರಂಟೈನ್ ಕೇಂದ್ರವಿದ್ದು, ತಮಿಳುನಾಡಿನಿಂದ ಬಂದ ಇಬ್ಬರು, ಕೇರಳದಿಂದ ಬಂದ ಒಬ್ಬರನ್ನು ಇರಿಸಲಾಗಿದೆ.ಕುಟ್ಟದಲ್ಲಿ ಕೇರಳದಿಂದ ಬಂದ ಇಬ್ಬರು, ಮಾಲ್ದಾರೆಯಲ್ಲಿ ತಮಿಳುನಾಡಿನಿಂದ ಬಂದ 4 ಮಂದಿ, ಹುದಿಕೇರಿಯಲ್ಲಿ ತಮಿಳುನಾಡಿನಿಂದ ಬಂದ ಇಬ್ಬರು, ವೀರಾಜಪೇಟೆಯಲ್ಲಿ ಕೇರಳದಿಂದ ಬಂದ 3 ಮಂದಿ ಕ್ವಾರಂಟೈನ್ ಕೇಂದ್ರದಲ್ಲಿದ್ದಾರೆ.

ಮಾಲ್ದಾರೆ ವಸತಿ ನಿಲಯದಲ್ಲಿದ್ದ 20 ಮಂದಿಯನ್ನು ಗೋಣಿಕೊಪ್ಪಲು ಸಮೀಪದ ರೆಸಾರ್ಟ್ ಒಂದರಲ್ಲಿ ಇರಿಸಲಾಗಿದೆ. ಇಲ್ಲಿ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ವಸತಿ ಮತ್ತು ಊಟದ ವೆಚ್ಚವನ್ನು ಕ್ವಾರಂಟೈನ್‍ಗೆ ಒಳಪಟ್ಟವರೇ ಭರಿಸುತ್ತಿದ್ದಾರೆ.

ವಸತಿ ನಿಲಯದ ಕ್ವಾರಂಟೈನ್ ಕೇಂದ್ರದವರಿಗೆ ಜಿಲ್ಲಾಡಳಿತದ ವತಿಯಿಂದ ಊಟ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಪೊನ್ನಂಪೇಟೆ ನಾಡ ಕಚೇರಿ ಕಂದಾಯ ಅಧಿಕಾರಿ ರಾಧಾಕೃಷ್ಣ ಮಾಹಿತಿ ನೀಡಿದರು.

ಇವುಗಳ ಮೇಲುಸ್ತುವಾರಿಗೆ ಪೊಲೀಸ್, ಆರೋಗ್ಯ, ಕಂದಾಯ ಅಧಿಕಾರಿಗಳ ಜತೆಗೆ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರನ್ನು ನೇಮಿಸಲಾಗಿದೆ.

-ಎನ್.ಎನ್. ದಿನೇಶ್