ಸೋಮವಾರಪೇಟೆ, ಮೇ 12: ಇಲ್ಲಿನ ಸವಿತಾ ಸಮಾಜದ ಸದಸ್ಯರಿಗೆ ಗುತ್ತಿಗೆದಾರ ಮಹಾದೇವ್ ಅವರು ಅಗತ್ಯ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್‍ಗಳನ್ನು ವಿತರಿಸಿದರು.

ಇಲ್ಲಿನ ಸವಿತಾ ಸಮಾಜದ ಸಭಾಂಗಣದಲ್ಲಿ ಸುಮಾರು 35 ಮಂದಿಗೆ ಶುಚಿತ್ವದ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಮಹದೇವ್, ಕೊರೊನಾ ಲಾಕ್‍ಡೌನ್‍ನಿಂದಾಗಿ ಒಂದೂವರೆ ತಿಂಗಳ ಕಾಲ ಅಂಗಡಿಗಳನ್ನು ತೆರೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ ಕೆಲ ದಿನಗಳಿಂದ ಸವಿತಾ ಸಮಾಜ ಬಾಂಧವರು ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕ್ಷೌರಿಕರ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಕಿಟ್‍ಗಳನ್ನು ವಿತರಿಸಿದ್ದಾಗಿ ತಿಳಿಸಿದರು.

ಸವಿತಾ ಸಮಾಜ ಬಾಂಧವರು ತಾವು ವೃತ್ತಿ ನಿರ್ವಹಿಸುವ ಸಂದರ್ಭ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ ಸೋಂಕು ಅಂಟದಂತೆ ತಡೆಗಟ್ಟಲು ಆಗಾಗ್ಗೆ ಸ್ಯಾನಿಟೈಸರ್ ಬಳಸಬೇಕು. ತಮ್ಮೊಂದಿಗೆ ತಮ್ಮ ಕುಟುಂಬದ ಆರೋಗ್ಯವನ್ನೂ ಕಾಪಾಡಿ ಕೊಳ್ಳಬೇಕೆಂಬ ಆಶಯದೊಂದಿಗೆ 10 ಸಾವಿರ ವೆಚ್ಚದಲ್ಲಿ ಸ್ಯಾನಿಟೈಸರ್ ಕಿಟ್ ವಿತರಿಸಲಾಗಿದೆ ಎಂದರು.

ಸವಿತಾ ಸಮಾಜದ ಅಧ್ಯಕ್ಷ ಶಂಕರ್ ಮಾತನಾಡಿ, ದಾನಿಗಳ ಸಹಕಾರವನ್ನು ಸ್ಮರಿಸಿದರಲ್ಲದೇ, ಸಮಾಜ ಬಾಂಧವರು ಕೆಲ ದಿನಗಳ ಕಾಲ ಮಸಾಜ್, ಫೇಸ್ ವಾಷ್‍ಗಳನ್ನು ಮಾಡಬಾರದು ಎಂದು ಮನವಿ ಮಾಡಿದರು.

ಈ ಸಂದರ್ಭ ಸಮಾಜದ ಉಪಾಧ್ಯಕ್ಷ ರಮೇಶ್, ಖಜಾಂಚಿ ಸುದೀಪ್, ಪ್ರಮುಖರಾದ ಬಾಲಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.