ಶನಿವಾರಸಂತೆ, ಮೇ 12: ಸಮೀಪದ ಕೊಡ್ಲಿಪೇಟೆ ಪಟ್ಟಣದ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಅವರು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ 125 ಬಡ ಕುಟುಂಬಗಳಿಗೆ ಬಟ್ಟೆಯ ಕಿಟ್ ಅನ್ನು ಸಂಸ್ಥೆ ಆವರಣದಲ್ಲಿ ವಿತರಿಸಿದರು.

ಲಾಕ್‍ಡೌನ್ ಹಿನ್ನೆಲೆ ವಿದ್ಯಾಸಂಸ್ಥೆ ವತಿಯಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಮಧ್ಯಾಹ್ನ ಉಚಿತ ಊಟದ ವಿತರಣಾ ವ್ಯವಸ್ಥೆಯನ್ನು 10 ದಿನಗಳಿಂದ ಮಾಡಲಾಗುತ್ತಿದೆ. ರಂಜಾನ್ ವೃತಾಚರಣೆ ಹಿನ್ನೆಲೆ ಮುಸ್ಲಿಂ ಸಮುದಾಯದವರು ಅನ್ನ ದಾಸೋಹದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ದಾನಿ ಚಂದ್ರಮೌಳಿ ಬಟ್ಟೆಗಳ ಕಿಟ್ ಅನ್ನು ಆಯ್ದ ಬಡ ಕುಟುಂಬಗಳಿಗೆ ವಿತರಿಸಿದರು.

ಈ ಪ್ರಯುಕ್ತ ನಡೆದ ಸರಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಚಂದ್ರಮೌಳಿ ಮಾತನಾಡಿ, ಎಲ್ಲಾ ಧರ್ಮಗಳ ಸಾರ ಒಂದೇ. ಇಸ್ಲಾಂ ಧರ್ಮದ ಪ್ರಕಾರ ನಮಾಜ್ ಮಾಡುವುದು, ಝಕಾತ್ ನೀಡುವುದು ಅತಿಮುಖ್ಯ. ಉಳ್ಳವರು ಬಡವರಿಗೆ ದಾನ ಮಾಡಿದರೆ ಮಾನವೀಯತೆ ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಭಾಗ ದಾನ ಮಾಡಿದರೆ ಸಿಗುವ ತೃಪ್ತಿ ಅಪಾರ ಎಂದರು.

ಮಸ್ಜಿದುನ್ನೂರ್ ಮಸೀದಿ ಅಧ್ಯಕ್ಷ ಸುಲೈಮಾನ್, ಸಂಸ್ಥೆ ಗೌರವಾಧ್ಯಕ್ಷ ಎಸ್.ಎಸ್. ನಾಗರಾಜ್, ಪ್ರಮುಖ ಔರಂಗ್ ಜೇಬ್ ಮಾತನಾಡಿದರು. ಸಂಸ್ಥೆ ಖಜಾಂಚಿ ಡಾ. ಉದಯಕುಮಾರ್, ಮುಖ್ಯ ಶಿಕ್ಷಕ ಅಬ್ದುಲ್ ರಬ್, ಪ್ರಾಂಶುಪಾಲ ನಿರಂಜನ್, ಜಗದೀಶ್ ಬಾಬು, ಪ್ರಮುಖರಾದ ಬ್ಯಾಡಗೊಟ್ಟ ಹನೀಫ್, ಇಕ್ಬಾಲ್ ಹುಸೇನ್, ನಿಸಾರ್, ಬಿ.ಕೆ. ಯತೀಶ್, ಶರತ್ ಶೇಖರ್, ರಂಗ ಸ್ವಾಮಿ, ಷಣ್ಮುಖಯ್ಯ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿತರಣಾ ಕಾರ್ಯ ಕ್ರಮದಲ್ಲಿ ಭಾಗಿಯಾದವರೆಲ್ಲರಿಗೂ ಸಾನಿಟೈಜರ್ ಹಾಗೂ ಮಾಸ್ಕ್‍ಗಳನ್ನು ವಿತರಿಸಲಾಯಿತು.