ಸುಂಟಿಕೊಪ್ಪ, ಮೇ 12: ಕೂಲಿ ಕೆಲಸಕ್ಕಾಗಿ ಉತ್ತರ ಭಾರತದಿಂದ ಲಾಕ್‍ಡೌನ್ ಮುಂಚಿತವಾಗಿ ಬಂದು ನೆಲೆಸಿದ್ದ ಕಾರ್ಮಿಕರು ಸ್ವ ಸ್ಥಳಕ್ಕೆ ತೆರಳಲು ಪರಿತಪಿಸುವಂತಾಗಿದ್ದು, ಕಾಲ್ನಡಿಗೆಯಲ್ಲಿ ಊರಿಗೆ ಹೊರಟ 20 ಮಂದಿಗೆ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿಯ ತಾಳ್ತತ್‍ಮನೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರೆಸಾರ್ಟ್ ಕಾಮಗಾರಿಯ ಕೂಲಿ ಕಾರ್ಮಿಕರು ಸುಂಟಿಕೊಪ್ಪ ಕಡೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದು, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ. ತಿಮ್ಮಪ್ಪ, ಸಾರ್ವಜನಿಕರು ಹಾಗೂ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಪ್ರಶ್ನಿಸಿದಾಗ 20 ಮಂದಿ ಇಲ್ಲಿ ಕೂಲಿ ಕೆಲಸ ಇಲ್ಲದಿರುವುದರಿಂದ ಊರಿಗೆ ತೆರಳುತ್ತಿರುವುದಾಗಿ ಉತ್ತರಿಸಿದ್ದರು.

ಲಾಕ್‍ಡೌನ್‍ನಿಂದ ಬಸ್, ರೈಲು ವ್ಯವಸ್ಥೆಗಳು ಇಲ್ಲದ ಕಾರಣ ಊರಿಗೆ ತೆರಳಲು ಆಸಾಧ್ಯವೆಂದು ಮನವೊಲಿಸಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಊರಿನ ಕೆಲವು ದಾನಿಗಳು ರಾತ್ರಿ ಭೋಜನ ಹಾಗೂ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಮಂಗಳವಾರ ಅವರಿಗೆ ಆರೋಗ್ಯ ತಪಾಸಣೆಯನ್ನು ವೈದ್ಯಾಧಿಕಾರಿ ಡಾ. ಜೀವನ್ ನಡೆಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದ ವ್ಯವಸ್ಥಾಪಕರನ್ನು ಸಂಪರ್ಕಿಸಿ ಅವರನ್ನು ಅಲ್ಲಿಗೆ ಕಳುಹಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ.