ಸಮಾಧಿಗಳ ಮೇಲೆ ಹೂರಾಶಿ ಬೆಳೆಸಬೇಕಾ ಗಿದೆ. ಸತ್ತಂತಿರುವ ಮನಸ್ಸುಗಳಲ್ಲಿ ಮತ್ತೆ ಜೀವಕಳೆ ತರಬೇಕಾಗಿದೆ. ಚೀನಾ ದೇಶದ ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್ ಮಹಾನಗರದ ಜನತೆ ಹೇಳುವ ಮಾತಿದು. ಕೊರೊನಾ ಬಂದದ್ದೇ ಈ ವುಹಾನ್‍ನಿಂದ. ಕಣ್ಣಿಗೆ ಕಾಣದ ವೈರಸ್‍ಅನ್ನು ಪ್ರಾರಂಭದಲ್ಲಿಯೇ ಕಡಿವಾಣ ಹಾಕುವ ಬದಲಿಗೆ ಊರಿಗೆಲ್ಲಾ ಹಬ್ಬಿಸಿ ಕೊನೆಗೀಗ ಜಗತ್ತಿಗೆ ವ್ಯಾಪಿಸುವಂತೆ ಮಾಡಿರುವ ವುಹಾನ್ ಮಾತ್ರ ತನ್ನಿಂದ ಏನೂ ಆಗಲೇ ಇಲ್ಲ ಎಂಬಂತೆ ನಿದ್ದೆ ಮಾಡಿ ಎದ್ದಂತೆ ಮೈಮುರಿದುಕೊಂಡು ಮೇಲೇಳುತ್ತಿದೆ. ವುಹಾನ್ ಸುಮಾರು 75 ದಿನಗಳ ಲಾಕ್‍ಡೌನ್ ಅವಧಿ ಮುಗಿಸಿ ಕಳೆದ ಎರಡು ವಾರದಿಂದ ಮತ್ತೆ ಸಕ್ರಿಯಗೊಂಡಿದೆ. ತಾನು ಹಬ್ಬಿಸಿದ ಮಹಾಮಾರಿ ಇಡೀ ಜಗತ್ತಿನ 220 ದೇಶಗಳಲ್ಲಿ ತಾಂಡವವಾಡುತ್ತಿರುವಾಗ ವುಹಾನ್ ಇದೀಗ ಬೇರೆ ದೇಶಗಳನ್ನು ನಿಮಗೇನು ಬೇಕು ಎಂದು ಬೇಡಿಕೆ ಮುಂದಿರಿಸಿದೆ.

ಡಿಸೆಂಬರ್‍ನಲ್ಲಿಯೇ ವುಹಾನ್ ಕೇಂದ್ರೀಯ ಆಸ್ಪತ್ರೆಯಲ್ಲಿ ಹೊಸದೊಂದು ವೈರಾಣು ಕಂಡುಬಂದಾಗ ಎಚ್ಚೆತ್ತುಕೊಂಡು ಇಡೀ ನಗರವನ್ನೇ ಲಾಕ್‍ಡೌನ್ ಮಾಡಿದ್ದೇ ಆದಲ್ಲಿ ಇದೀಗ ಜಗತ್ತಿನ 150ಕ್ಕೂ ಅಧಿಕ ದೇಶಗಳು ಲಾಕ್‍ಡೌನ್ ಆಗುವ ದುಸ್ಥಿತಿ ಖಂಡಿತಾ ಇರುತ್ತಿರಲಿಲ್ಲ. ಆದರೆ ವುಹಾನ್ ಮತ್ತು ಚೀನಾ ಆಡಳಿತದ ಬೇಜವಾಬ್ದಾರಿತನದಿಂದಾಗಿ ಕೋವಿಡ್ 19 ಎಂಬ ಹೊಸ ಸೋಂಕು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ. ಹುಬೈ ಪ್ರಾಂತ್ಯದ ರಾಜಧಾನಿಯಾಗಿ 11 ಮಿಲಿಯನ್ ಜನರ ಮೂಲಕ ಚೀನಾದ 7 ನೇ ಅತ್ಯಧಿಕ ಜನಸಂಖ್ಯೆಯುಳ್ಳ ಮಹಾನಗರವಾಗಿರುವ ವುಹಾನ್ ಕೈಗಾರಿಕೆ, ಔಷಧಿ ತಯಾರಿಕೆ, ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಜಗತ್ತಿನಲ್ಲಿಯೇ ಖ್ಯಾತವಾಗಿದೆ. ವುಹಾನ್ ನಲ್ಲಿಯೇ 350 ಉದ್ಯಮಗಳು ವೈದ್ಯಕೀಯ ಉಪಕರಣಕ್ಕೆ ಮೀಸಲಾಗಿದೆ. ಸಾಮಾಜಿಕ, ರಾಜಕೀಯ, ಶೈಕ್ಷಣಿಕ ರಂಗದಲ್ಲಿಯೂ ವುಹಾನ್ ಹೆಸರುವಾಸಿಯಾದ ನಗರ.

ಕೊರೊನಾದ ಸೃಷ್ಟಿಕರ್ತ ನಗರ ಎಂದೇ ಕುಖ್ಯಾತವಾಗಿರುವ ವುಹಾನ್ ಡಿಸೆಂಬರ್‍ನಿಂದ ಮಾರ್ಚ್‍ನವರೆಗೆ 2,600 ಜನರನ್ನು ಕೊರೊನಾಕ್ಕೆ ಬಲಿಕೊಟ್ಟಿದೆ. ಜತೆಗೇ 55 ಸಾವಿರ ಸೋಂಕಿತ ಜನರನ್ನು ವುಹಾನ್ ನಗರವೊಂದೇ ಹೊಂದಿತ್ತು. ಚೀನಾದಲ್ಲಿ ಕೊರೊನಾ ಸೋಂಕು ಹೊಂದಿದವರ ಪೈಕಿ ಶೇ.60 ರಷ್ಟು ಮಂದಿ ವುಹಾನ್‍ನವರೇ ಆಗಿದ್ದರು. ಸರ್ಕಾರವೂ ಪ್ರಾರಂಭಿಕವಾಗಿ ತೋರಿದ ನಿರ್ಲಕ್ಷ್ಯದ ಪರಿಣಾಮ ಜನರಿಗೆ ಸೋಂಕು ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಹೋಯಿತು. ಆಸ್ಪತ್ರೆಯೊಂದರ ನರ್ಸ್ ಹೇಳಿದಂತೆ, ಸೋಂಕಿತ ವ್ಯಕ್ತಿಗೆ ಹಾಸಿಗೆ ಸಿಗಬೇಕೆಂದರೆ 4 ದಿನ ಆತ ಆಸ್ಪತ್ರೆ ಹೊರಕ್ಕೆ ಮಲಗಬೇಕಾಗಿತ್ತು. 1 ಹಾಸಿಗೆ ಸಿಕ್ಕಿದರೆ ಸಾಕು ಎಂಬಂತೆ ಸೋಂಕಿತರು ದೈನ್ಯದಿಂದ ಕೋರಿಕೊಳ್ಳುತ್ತಿದ್ದರು. 40 ಹಾಸಿಗೆಗಳ ಆಸ್ಪತ್ರೆಗೆ 400 ಜನ ಸೋಂಕಿತರು ಬಂದು ವಾರ್ಡ್ ಹೊರಗಡೇ ಮಲಗುತ್ತಿದ್ದರು. ಸುಮಾರು 45 ದಿನಗಳ ಕಾಲ ವುಹಾನ್‍ನಲ್ಲಿನ 60 ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‍ಗಳು, ದಾದಿಯರು ಕೇವಲ 3-4 ಗಂಟೆ ಮಾತ್ರ ನಿದ್ದೆ ಮಾಡಿ ವಿರಾಮವೇ ಇಲ್ಲದೇ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಒಂದು ಕಡೆ ಸೋಂಕಿತರಿಗೆ ಚಿಕಿತ್ಸೆ ನೀಡುವಾಗಲೇ ಮತ್ತೊಂದು ಕಡೆ ನರ್ಸ್‍ಗಳಿಗೇ ಸೋಂಕು ತಗುಲಿ ಅವರೂ ಹಾಸಿಗೆ ಹಿಡಿಯತೊಡಗಿದರು. 60 ವರ್ಷ ಮೀರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಸತ್ತಿದ್ದಾರೆ. ಆಗೆಲ್ಲಾ ಜೋರಾಗಿ ಅಳುತ್ತಿದ್ದೆ. ಕೊನೆಕೊನೆಗೇ ಸಾಯುವವರ ಸಂಖ್ಯೆ ಹೆಚ್ಚಾಗತೊಡಗಿದಂತೇ ನನ್ನ ಕಣ್ಣೀರು ಬತ್ತಿಹೋಗಿತ್ತು. ಮನಸ್ಸಿನಲ್ಲಿ ಭಾವನೆಗಳೇ ಇರಲಿಲ್ಲ. ಆಸ್ಪತ್ರೆಗೆ ಬರುತ್ತಾರೆ. ಸಾಯುತ್ತಾರೆ ಎಂಬಂತಾಗಿತು. ಮೊದಲ ಎರಡು ವಾರ ನಮಗೆ ಯಾವುದೇ ಜೀವರಕ್ಷಕ ಉಪಕರಣಗಳೂ ಇರಲಿಲ್ಲ. ಈಗಿನ ಪರಿಸ್ಥಿತಿ ಗಮನಿಸಿದರೆ ನನ್ನ ಅನೇಕ ಗೆಳತಿಯರು, ಬಂಧುಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂತು ಎಂಬ ನರ್ಸ್ ಹೇಳಿಕೆ ವುಹಾನ್ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಇದೀಗ ವುಹಾನ್ ಮತ್ತೆ ಲಾಕ್‍ಡೌನ್‍ನಿಂದ ಮುಕ್ತಗೊಂಡಿದೆ. ಕಳೆದ ತಿಂಗಳು ವುಹಾನ್ ಜನ ಮನೆಯಿಂದ 75 ದಿನಗಳ ಬಳಿಕ ಹೊರಬಂದಿದ್ದಾರೆ. ಪಕ್ಕದ ಮನೆಯವನು ಕಾಣುತ್ತಿಲ್ಲ, ಮುಂದೆ ಮನೆಯವನು ಸತ್ತೇ ಹೋಗಿದ್ದಾನೆ. ದೂರದೂರಿನ ಬಂಧು ಫೆÇೀನ್ ಕರೆ ಸ್ವೀಕರಿಸುತ್ತಿಲ್ಲ. ಗೆಳೆಯ, ಗೆಳತಿಯರೂ ಬಾರದ ಲೋಕಕ್ಕೇ ಹೋಗಿದ್ದಾರೆ. ಹೀಗೆಲ್ಲಾ ಲೆಕ್ಕಾಚಾರಗಳು ವುಹಾನ್ ಜನರಲ್ಲಿದೆ. ವುಹಾನ್‍ನ ದೊಡ್ಡ ಮಾರ್ಕೆಟ್ ಹ್ಯಾನ್ ಸ್ಟ್ರೀಟ್‍ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಜನ ಖರೀದಿಗೆ ಮುಂದಾಗಿದ್ದಾರೆ. ಆದರೆ ವುಹಾನ್‍ನಲ್ಲಿ ಜನರ ಆಕ್ರೋಶ ಕಟ್ಟೆಯೊಡೆದಿದೆ. ಕಟ್ಟಡದ ಬಾಡಿಗೆ ಹಣ ನೀಡುವುದಿಲ್ಲ, ಲೀಸ್ ಹಣ ಮರಳಿಸಿ, ಸಾಲ ಬಾಕಿ ಕೊಡೋದಿಲ್ಲ, ದುಡ್ಡು ಕೇಳಬೇಡಿ ಎಂಬ ತಕರಾರು ಹೆಚ್ಚಾಗಿದೆ. ಪೆÇಲೀಸರಿಗೂ ಕ್ಯಾರೇ ಎನ್ನದ ವುಹಾನ್ ಜನ ಒಂದು ರೀತಿಯಲ್ಲಿ ಹತಾಶರಾಗಿ ಕ್ರಾಂತಿಯ ಹೋರಾಟಕ್ಕೆ ಇಳಿದಂತಿದೆ. ನೆಮ್ಮದಿಯಿಂದಿದ್ದ ವುಹಾನ್ ಕೊರೊನಾದಿಂದಾಗಿ ತನ್ನೆಲ್ಲಾ ಸಂಪನ್ಮೂಲಗಳನ್ನು ಕಳೆದುಕೊಂಡ ಹತಾಶ ಸ್ಥಿತಿಯಲ್ಲಿದೆ. ವುಹಾನ್ ಮತ್ತೆ ಮೊದಲಿನಂತಾಗಲು ಏನಿಲ್ಲವೆಂದರೂ ಮೂರು ವರ್ಷಗಳು ಬೇಕೇ ಬೇಕು ಎಂಬುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯ. ಆದರೂ ವುಹಾನ್ ಜನರಲ್ಲಿ ಜೀವನದ ಬಗ್ಗೆ ಭರವಸೆಯಿದೆ. ನಾವೇ ಬೆಟರ್, ನಮಗಿಂತ ಅಮೇರಿಕಾದಲ್ಲಿಯೇ ಹೆಚ್ಚು ಜನ ಸತ್ತಿದ್ದಾರೆ. ಇಟಲಿ ನೋಡಿ, ಜರ್ಮನಿ ಗಮನಿಸಿ, ಯುರೋಪ್ ಕೇಳುವುದೇ ಬೇಡ. ಅವರಿಗೆಲ್ಲಾ ಹೋಲಿಸಿದರೆ ನಾವೇ ಬೆಟರ್ ಅಲ್ವಾ ಎಂದು ವುಹಾನ್ ನಾಗರಿಕರು ಹೇಳಿಕೊಂಡು ತೃಪ್ತಿಪಟ್ಟುಕೊಳ್ಳುತ್ತಿದ್ದಾರಂತೆ. ನೆನಪಿಡಿ, ಬೆಂಗಳೂರಿನಿಂದ 4,200 ಕಿ.ಮೀ. ದೂರವಿರುವ ವುಹಾನ್ ಇಲ್ಲಿಗೂ ಸೋಂಕು ತಂದಿಟ್ಟಿದೆ. ಮಾತ್ರವಲ್ಲ, ವುಹಾನ್‍ನಿಂದ 12,600 ಕಿ.ಮೀ. ದೂರದಲ್ಲಿರುವ ಅಮೇರಿಕಾವೂ ಸೋಂಕಿನಿಂದ ತತ್ತರಿಸಿದೆ. ದೂರದ ಲೆಕ್ಕವೇ ಇಲ್ಲದೇ ಸೋಂಕು ಜಗದಗಲ ಹಬ್ಬುತ್ತಿದೆ. ಹೀಗಾಗಿಯೇ ಸರ್ಕಾರ ಹೇಳುತ್ತಲೇ ಇದೆ. ಮನೆಯಲ್ಲಿರಿ, ಮನೆಯಲ್ಲಿರಿ ಎಂದು.

ಕೊನೇ ಹನಿ.

ಕೊರೊನಾ ಸೋಂಕಿನಿಂದ ಜನ ಸಾವಿಗೀಡಾಗುತ್ತಿರುವಂತೆಯೇ ಬಂಧುಮಿತ್ರರ ಕಣ್ಣೀರು ಮಳೆಯಂತೆ ಹರಿಯುತ್ತಿರುವಾಗಲೇ ವುಹಾನ್ ಇಡೀ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡಿತು. ಸಾವಿನ ಕೂಪವಾಗಿದ್ದ ವುಹಾನ್ ಸಾಧನೆಯೆಂದರೆ ಅದು 6,45,00 ಚದರ ಅಡಿಗಳ ಸುಸರ್ಜಿತ ಆಸ್ಪತ್ರೆಯೊಂದನ್ನು ನಿರ್ಮಿಸಿದ್ದು, ಈ 2 ಮಹಡಿಗಳ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲು ವುಹಾನ್ ಆಡಳಿತ ತೆಗೆದುಕೊಂಡದ್ದು ಕೇವಲ 10 ದಿನಗಳನ್ನು ಮಾತ್ರ. 7,500 ಕಾರ್ಮಿಕರು ಹಂತಹಂತದ ನಿರ್ಮಾಣ ಕಾಮಗಾರಿಯನ್ನು ಪೂರೈಸಿದರು. ಇದರಲ್ಲಿ 1,400 ವೈದ್ಯಕೀಯ ಸಿಬ್ಬಂದಿಗಳಿಗಾಗಿ 71 ಐಸೋಲೇಶನ್ ವಾರ್ಡ್‍ಗಳು, 30 ತೀವ್ರ ನಿಗಾಘಟಕಗಳಿದ್ದವು. 1 ಸಾವಿರ ಹಾಸಿಗೆಗಳಿದ್ದವು. ಕಾರ್ಮಿಕರು, ಇಂಜಿನಿಯರ್ ಗಳು 10 ದಿನಗಳ ಕಾಲ ಎಡೆಬಿಡದೇ ಆಸ್ಪತ್ರೆಯನ್ನು ನಿರ್ಮಿಸಿಬಿಟ್ಟರು. ಮೊದಲ 40 ಕೊರೊನಾ ಸೋಂಕಿತರನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತು. ತರುವಾಯ ಆಸ್ಪತ್ರೆಯನ್ನು ಚೀನಾ ಸೇನಾಪಡೆಯ ನಿರ್ವಹಣೆಗೆ ಹಸ್ತಾಂತರಿಸಲಾಯಿತು. ಈಗ ವುಹಾನ್ ಲಾಕ್‍ಡೌನ್‍ನಿಂದ ಮುಕ್ತಿಕಂಡ ಮೇಲೆ, ಕೊರೊನಾ ಸಂಪೂರ್ಣ ಅಲ್ಲದಿದ್ದರೂ ಬಹುತೇಕವಾಗಿ ನಿಯಂತ್ರಣಕ್ಕೆ ಬಂದ ಮೇಲೆ ಈ ಆಸ್ಪತ್ರೆಯನ್ನು ಮುಚ್ಚಲಾಗಿದೆ. ಅಂದ ಹಾಗೇ ಮಂಗಳವಾರ ವುಹಾನ್‍ನಲ್ಲಿ ಏಪ್ರಿಲ್ 6ರ ಬಳಿಕ ಮೊದಲ ಪ್ರಕರಣವಾಗಿ 6 ಹೊಸ ಸೋಂಕು ಪ್ರಕರಣ ವರದಿಯಾಗಿದ್ದು, ಕೊರೊನಾ ಸೋಂಕು ಮರುಕಳಿಸಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಇದೀಗ ವುಹಾನ್ ಆಡಳಿತ 1.1 ಕೋಟಿ ಜನರ ವೈದ್ಯಕೀಯ ಪರೀಕ್ಷೆಗೆ ಮುಂದಾಗಿದ್ದು ಇಷ್ಟೂ ಜನರ ಪರೀಕ್ಷೆ 10 ದಿನಗಳಲ್ಲಿ ಮುಗಿಯಬೇಕು ಎಂಬ ಆದೇಶ ಹೊರಡಿಸಿದೆ.