ಮಡಿಕೇರಿ, ಮೇ 12: ಕರ್ನಾಟಕ - ಕೇರಳ ರಾಜ್ಯಗಳನ್ನು ಬೆಸೆಯುವ ಅಂತರರಾಜ್ಯ ಗಡಿಗಳಲ್ಲಿನ ಕಾಡುದಾರಿಯಲ್ಲಿ ಜಿಲ್ಲಾಡಳಿತದ ನಿಬರ್ಂಧ ಉಲ್ಲಂಘಿಸಿ ಸಾಕಷ್ಟು ಮಂದಿ ಕೊಡಗಿಗೆ ನುಸುಳಿ ಬರುತ್ತಿದ್ದು, ಇಂತಹವರ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕೈಜೋಡಿಸಿ ಸೂಕ್ತ ಕಾನೂನು ಕ್ರಮತೆಗೆದುಕೊಳ್ಳಬೇಕೆಂದು ಜಿ.ಪಂ. ಮಾಜಿ ಅಧ್ಯಕ್ಷೆ ಶರಿನ್ ಸುಬ್ಬಯ್ಯ ಹಾಗೂ ಇತರರು ಒತ್ತಾಯಿಸಿದ್ದಾರೆ.

ಇಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಕುಟ್ಟಕ್ಕೆ ತೆರಳುವದರೊಂದಿಗೆ, ಅಲ್ಲಿನ ಕೇರಳ ಗಡಿಯಲ್ಲಿ ಖುದ್ದು ಸುರಕ್ಷಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭ ಜಿ.ಪಂ. ಮಾಜಿ ಅಧ್ಯಕ್ಷರೊಂದಿಗೆ ಬಿಜೆಪಿ ಪ್ರಮುಖರಾದ ನೆಲ್ಲಿರ ಚಲನ್‍ಕುಮಾರ್, ಕುಂಞಂಗಡ ಅರುಣ್ ಭೀಮಯ್ಯ, ಮುಕ್ಕಾಟಿರ ನವೀನ್ ಅಯ್ಯಪ್ಪ ಮೊದಲಾದವರು ಗಡಿ ಸಮಸ್ಯೆ ಬಗ್ಗೆ ಗಮನ ಸೆಳೆದರು.

ಕೊಡಗಿನ ಕುಟ್ಟ ಹಾಗೂ ಮಾಕುಟ್ಟ ಚೆಕ್‍ಪೋಸ್ಟ್‍ಗಳಲ್ಲಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿ, ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರೂ, ಈ ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಕಾಲುದಾರಿಗಳಲ್ಲಿ ನುಸುಳುಕೋರರು ಅಕ್ರಮ ಪ್ರವೇಶದೊಂದಿಗೆ ತೋಟಗಳ ಮುಖಾಂತರ ಜಿಲ್ಲೆಯ ಗಡಿಭಾಗದ ಪಟ್ಟಣಗಳಿಗೆ ಬಂದು ಮದ್ಯ ಇತ್ಯಾದಿ ಸಾಗಿಸುತ್ತಿರುವದಾಗಿ ಆರೋಪಿಸಿದರು.

ಈ ಸಂಬಂಧ ಕುಟ್ಟ ಹಾಗೂ ಶ್ರೀಮಂಗಲ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿಗಳೊಂದಿಗೆ ಖುದ್ದು ಚರ್ಚಿಸಿದ ಸುನಿಲ್ ಸುಬ್ರಮಣಿ ಗಡಿಭಾಗದ ಜನತೆಗೆ ಮಾನವೀಯ ನೆಲೆಯಲ್ಲಿ ಪೊಲೀಸ್ ಇಲಾಖೆ ಸ್ಪಂದಿಸುವಂತೆ ತಿಳಿಹೇಳಿದರಲ್ಲದೆ, ಯಾವದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಾಕೀತು ಮಾಡಿದರು.

ಅಲ್ಲದೆ ಅರಣ್ಯ ಪ್ರದೇಶದೊಳಗೆ ಗಡಿಗಳಲ್ಲಿ ನುಸುಳಿ ಬರುವವರ ಬಗ್ಗೆ, ಪೊಲೀಸ್ ಇಲಾಖೆಯೊಂದಿಗೆ ಸಂಬಂಧಿಸಿದ ಅರಣ್ಯಾಧಿಕಾರಿಗಳು ಸಹಕಾರ ನೀಡುವ ಮೂಲಕ ಅಕ್ರಮಗಳಿಗೆ ತಡೆಯೊಡ್ಡುವಂತೆ ಮೇಲಧಿಕಾರಿಗಳಿಗೆ ಸೂಚಿಸುವಂತೆ ಅರಣ್ಯ ಸಚಿವರ ಗಮನ ಸೆಳೆಯುವದಾಗಿ ಅವರು ಭರವಸೆ ನೀಡಿದರು.

ಕುಟ್ಟ ಹಾಗೂ ಮಾಕುಟ್ಟ ಗಡಿ ಚೆಕ್‍ಪೋಸ್ಟ್‍ಗಳಲ್ಲಿ ಭದ್ರತೆಯ ಪರಿಶೀಲಿಸಿದ ಮೇಲ್ಮನೆ ಸದಸ್ಯರು, ವೀರಾಜಪೇಟೆ ತಾಲೂಕಿನ ತಾ.ಪಂ. ಹಾಗೂ ಗ್ರಾ.ಪಂ. ಅಧಿಕಾರಿಗಳು, ಪೊಲೀಸ್ ವೃತ್ತ ನಿರೀಕ್ಷಕರು, ಆಯ ಠಾಣಾಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಕೊರೊನಾ ಸೋಂಕು ತಡೆಗೆ ಜಿಲ್ಲಾಡಳಿತದ ನಿರ್ದೇಶನದಂತೆ ಅಗತ್ಯ ಕ್ರಮಕ್ಕೆ ಸಲಹೆ ನೀಡಿದರು.