ಕುಶಾಲನಗರ, ಮೇ 12: ಕೊಡಗು ಜಿಲ್ಲೆಯಿಂದ ತಮಿಳುನಾಡಿಗೆ ಕಾಲ್ನಡಿಗೆಯಲ್ಲೇ ತೆರಳಲು ಹೊರಟ 17 ಮಂದಿ ತೋಟ ಕಾರ್ಮಿಕರು ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಪ್ರಕರಣ ಕಂಡುಬಂದಿದೆ. ಸುಂಟಿಕೊಪ್ಪ ಸಮೀಪದ ಕೆದಕಲ್ ಬಳಿಯ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಸ್ತ್ರೀಯರು, ಪುರುಷರು, ಮಕ್ಕಳು ಸೇರಿದಂತೆ ಒಟ್ಟು 17 ಮಂದಿ ಕೆದಕಲ್‍ನಿಂದ ನಡೆದುಕೊಂಡು ಬಂದು ಕುಶಾಲನಗರ ಪೊಲೀಸ್ ತಪಾಸಣಾ ಕೇಂದ್ರ ದಾಟಿ ಮೈಸೂರು ಜಿಲ್ಲೆಯ ಕೊಪ್ಪ ತಪಾಸಣಾ ಕೇಂದ್ರಕ್ಕೆ ತಲುಪಿದ್ದಾರೆ. ಅಲ್ಲಿಂದ ಮುಂದೆ ತೆರಳಲು ಮೈಸೂರು ಜಿಲ್ಲಾ ಪೊಲೀಸರು ಅನುಮತಿ ಕಲ್ಪಿಸದ ಹಿನ್ನೆಲೆಯಲ್ಲಿ ಕೊಪ್ಪ ಕಾವೇರಿ ಸೇತುವೆ ಬಳಿ ಮರದಡಿ ಕುಳಿತು ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಆನ್‍ಲೈನ್ ಪಾಸ್ ಪಡೆದಿರುವುದಾಗಿ ಮಾಹಿತಿ ನೀಡಿರುವ ತಂಡದ ಸದಸ್ಯ ರಮೇಶ್ ಎಂಬಾತ ತಾವುಗಳು ಇದೀಗ ವಾಹನ ಸೌಕರ್ಯವಿಲ್ಲದೆ ಅತಂತ್ರ ಸ್ಥಿತಿ ಎದುರಿಸುತ್ತಿರುವುದಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.