ಕಣಿವೆ, ಮೇ 11: ಹಾರಂಗಿ ಜಲಾಶಯದ ನೀರನ್ನು ಕುಶಾಲನಗರದ ನಿವಾಸಿಗಳಿಗೆ ಸರಬರಾಜು ಮಾಡುವ ದೂರಾಲೋಚನೆಯೊಂದಿಗೆ ಕಳೆದ ನಾಲ್ಕು ವರ್ಷಗಳ ಹಿಂದೆಯೆ ಜಲಮಂಡಳಿ ರೂ. 70 ಕೋಟಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ಕುಶಾಲನಗರ ಪಟ್ಟಣ ಪಂಚಾಯತಿ ಮೂಲಕ ಶಾಸಕ ರಂಜನ್ ಅವರಿಗೆ ಸಲ್ಲಿಸಿತ್ತು. ಆದರೆ ಅಂದು ರಾಜ್ಯದಲ್ಲಿ ಅಧಿಕಾರ ದಲ್ಲಿದ್ದ ಕಾಂಗ್ರೆಸ್ ಸರ್ಕಾರ 70 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲು ನಕಾರ ಮಾಡಿತ್ತು. ಇದೀಗ ಅದೇ ಹಳೆಯ ಪ್ರಸ್ತಾವನೆಯನ್ನು ಶಾಸಕ ಅಪ್ಪಚ್ವು ರಂಜನ್ ನಗರಾಭಿವೃದ್ಧಿ ಸಚಿವರಿಗೆ ಸಲ್ಲಿಸಿದ್ದು, ನಗರಾಭಿವೃದ್ಧಿ ಸಚಿವ ಬಸವರಾಜ ಅವರು 70 ಕೋಟಿ ರೂ.ಗಳ ಬದಲಾಗಿ ಕೇವಲ 35 ಕೋಟಿ ಅನುದಾನ ಬಿಡುಗಡೆ ಗೊಳಿಸಲು ನಿಯಮಾನುಸಾರ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಕೇವಲ ಭರವಸೆಯ ಪತ್ರವನ್ನು ನೀಡಿರುತ್ತಾರೆ ಹೊರತು ಹಣವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿಲ್ಲ. ವಾಸ್ತವ ಎಂದರೆ ಸರ್ಕಾರದ ಖಜಾನೆ ಈ ಬಾರಿ ದುರದೃಷ್ಟವಶಾತ್ ಖಾಲಿಯಾಗಿರುವುದರಿಂದ ಈ ಹಣವೂ ಬಿಡುಗಡೆಯಾಗುವ ವಿಶ್ವಾಸ ಕುಶಾಲನಗರದ ನಿವಾಸಿಗಳಿಗೂ ಇಲ್ಲ. ಜನಪ್ರತಿನಿಧಿಗಳಿಗೂ ಇಲ್ಲ. ಆದರೆ ಕುಶಾಲನಗರ ಪಟ್ಟಣ ಕೊಡಗು ಜಿಲ್ಲೆಯಲ್ಲಿನ ಇತರ ಪಟ್ಟಣಗಳ ಪೈಕಿ ನಾಗಾಲೋಟದಿಂದ ಬೆಳೆಯುತ್ತಿರುವ ನಗರವಾಗಿರುವುದರಿಂದ, ಜೊತೆಗೆ ರಾಜ್ಯ ಸರ್ಕಾರವೇ ಘೋಷಿತ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಕೂಡ ಆಗಿರುವುದರಿಂದ ಕುಡಿಯುವ ನೀರಿಗೆ ಜಿಲ್ಲಾಡಳಿತ ವಿಶೇಷ ಗಮನಹರಿಸಬೇಕಾದ ತುರ್ತು ಅನಿವಾರ್ಯವೂ ಇದೆ. ಸುಮಾರು 18 ಸಾವಿರ ಜನಸಂಖ್ಯೆಯುಳ್ಳ ಕುಶಾಲನಗರ ಪಟ್ಟಣವೂ ಸೇರಿದಂತೆ ಕುಶಾಲನಗರಕ್ಕೆ ಹೊಂದಿಕೊಂಡಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ 5 ರಿಂದ 7 ಸಾವಿರ ಜನಸಂಖ್ಯೆ ಸೇರಿ ಒಟ್ಟು 26 ಸಾವಿರ ಜನಸಂಖ್ಯೆಗೆ ಪ್ರತಿ ದಿನ 28 ಲಕ್ಷ ಲೀಟರ್ ನೀರನ್ನು ಕಾವೇರಿ ನದಿಯಿಂದ ಮೇಲೆತ್ತಿ ಜಲಮಂಡಳಿ ಬಳಿ ಶುದ್ಧೀಕರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.
ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 135 ಲೀ. ನೀರನ್ನು ಪೂರೈಸಬೇಕಿದೆ. ಆದರೆ ನಾವು ಪ್ರಸ್ತುತ 100 ಲೀ. ಮಾತ್ರ ಪೂರೈಸುತ್ತಿದ್ದೇವೆ. ಈಗಾಗಲೇ ಕಾವೇರಿ ನದಿ ದಂಡೆಯ ಜಲಾಗಾರದಲ್ಲಿ 65 ಎಚ್. ಪಿ. ಸಾಮಥ್ರ್ಯದ ಎರಡು ಯಂತ್ರಗಳಿದ್ದು ಒಂದು ಯಂತ್ರ ದುರಸ್ತಿಯಾದರೆ ಬದಲೀ ಮತ್ತೊಂದು ಯಂತ್ರದಿಂದ ನೀರೆತ್ತುವ ಮೂಲಕ ಕುಡಿಯುವ ನೀರಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಕುಶಾಲನಗರ ಜಲಮಂಡಳಿ ಸಹಾಯಕ ಅಭಿಯಂತರ ಆನಂದಕುಮಾರ್ ಮಾಹಿತಿ ನೀಡಿದ್ದರು. ಸರ್ಕಾರಕ್ಕೆ ಈ ಮೊದಲೇ 70 ಕೋಟಿ ರೂಗಳ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಆದರೆ ಇದೀಗ ಅಷ್ಟೂ ಹಣವನ್ನು ಏಕಕಾಲದಲ್ಲಿ ಬಿಡುಗಡೆ ಗೊಳಿಸಲು ತ್ರಾಸವಾಗಬಹುದು ಎಂಬ ಕಾರಣಕ್ಕೆ ಮೊದಲ ಹಂತವಾಗಿ ಹಾರಂಗಿ ಜಲಾಶಾಯದಿಂದ ಕುಶಾಲನಗರಕ್ಕೆ ನೀರು ತರುವ ಯೋಜನೆಗೆ 35 ಕೋಟಿ ರೂಗಳನ್ನು ಬಿಡುಗಡೆಗೊಳಿಸುವಂತೆ ಶಾಸಕರು ಸಚಿವರಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಹಣ ಬಂದ ಬಳಿಕ ನಂತರ ಎರಡನೇ ಹಂತವಾಗಿ ಕುಶಾಲನಗರದಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಅಳವಡಿಸಿದ್ದ ಪೈಪ್‍ಲೈನ್‍ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಹೊಸ ಪೈಪ್‍ಗಳನ್ನು ಅಳವಡಿಕೆಗೊಳಿಸಲು ಯೋಜನೆ ರೂಪಿಸಬೇಕಾಗುತ್ತದೆ ಎಂದು ಆನಂದ್ ಮಾಹಿತಿ ನೀಡಿದರು. ಕಳೆದ ವರ್ಷ ಮತ್ತು ಪ್ರಸಕ್ತ ವರ್ಷ ಕಾವೇರಿ ನದಿಯಲ್ಲಿ ನೀರಿನ ಹರಿವು ಒಂದಷ್ಟು ಸುಧಾರಿಸಿದ್ದರಿಂದ ಜಲಮಂಡಳಿ ಕಾವೇರಿ ನದಿಯ ಜಲಾಗಾರದ ಬಳಿ ನೀರು ಶೇಖರಿಸಲು ಮರಳು ಚೀಲಗಳನ್ನು ಬಳಸಿ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸುವುದು ತಪ್ಪಿದೆ.
ಕಾವೇರಿ ನದಿಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಕುಶಾಲನಗರ ಹಾಗು ಮುಳ್ಳುಸೋಗೆ ನಿವಾಸಿಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್‍ಗಳಲ್ಲಿ ಕುಡಿವ ನೀರು ಪೂರೈಸಿತ್ತು. ಇದನ್ನು ಮನಗಂಡು ಅಂದಿನ ಪಂಚಾಯತಿ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿದ್ದ ಟಿ. ಆರ್. ಶರವಣಕುಮಾರ್ ಅವರ ವಿಶೇಷ ಆಸಕ್ತಿಯಿಂದಾಗಿ ಜಲಮಂಡಳಿ ಅಧಿಕಾರಿಗಳು ಹಾರಂಗಿ ಜಲಾಶಯದಿಂದ ಕುಡಿಯುವ ನೀರನ್ನು ಕುಶಾಲನಗರಕ್ಕೆ ತರುವ ಈ 70 ಕೋಟಿ ರೂ.ಗಳ ಯೋಜನೆ ತಯಾರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಾರೆ ಕುಶಾಲನಗರದ ನಾಗರಿಕರಿಗೆ ಕುಡಿವ ನೀರು ಪೂರೈಸುವ ಈ ಬೃಹತ್ ಯೋಜನೆಗೆ ಶಾಸಕ ರಂಜನ್ ಜೊತೆ ಸಂಸದ ಪ್ರತಾಪ್ ಸಿಂಹ ಕೂಡ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಕೈಜೋಡಿಸಬೇಕಿದೆ.