(ಕಳೆದ ಸಂಚಿಕೆಯಿಂದ) ಕೊನೆಗೂ 3 ಗಂಟೆಗಳ ಕಾಲ ಚಾರಣಿಸಿ ತಿಲಾ ಲೋಟನಿ ಪರ್ವತ ತಲುಪಿದೆವು. ಇದು ಸಮುದ್ರ ಮಟ್ಟದಿಂದ 13,800 ಅಡಿ ಎತ್ತರದಲ್ಲಿದೆ. ಸುತ್ತಲು ಬರಿ ಬಿಳಿ ಬಣ್ಣ, ಹಿಮ ಪರ್ವತಗಳ ರಾಶಿ. ಫೋಟೋ ತೆಗೆಯಲೂ ಮರೆತು ಪ್ರಕೃತಿಯ ಸೌಂದರ್ಯವನ್ನು ಸವಿದು ಎಲ್ಲರೂ ಮೈ ಮರೆತರು. ನಮ್ಮ ದೇಶದ ಬಾವುಟವನ್ನು ಕೆಲ ಚಾರಣಿಗರು ಇಲ್ಲಿ ತಂದಿದ್ದು, ಅದನ್ನು ಹಿಡಿದುಕೊಂಡು ರಾಷ್ಟ್ರಗೀತೆಯನ್ನು ಹಾಡಿದ್ದು ಮೈ ಜುಂ ಎನಿಸಿತು. ದೇಶದ ವಿವಿಧೆಡೆಗಳಿಂದ ಬಂದಿದ್ದರೂ ರಾಷ್ಟ್ರಗೀತೆ ನಮ್ಮನ್ನು ಒಂದು ಮಾಡಿತು. ಪರ್ವತ ಏನೋ ಏರಿ ಆಯ್ತು, ಸಾವಿರ ಫೋಟೋಗಳು ತೆಗೆದು ಆಯಿತು, ಇನ್ನು ಸುಲಭದ ಕೆಲಸ ಎಂದು ತಿಳಿದಿದ್ದೆವು. ಆದರೆ 13,800 ಅಡಿ ಎತ್ತರದಲ್ಲಿ ಆಮ್ಲ ಜನಕ ಬಹಳ ಕಡಿಮೆ. ದೇಹದೊಳಗೆ ರಕ್ತ ಸಂಚಾರ ನಡೆಸಲು ಎದೆಗೆ ಇಮ್ಮಡಿ ಕೆಲಸ. ಇಷ್ಟು ಎತ್ತರದ ಪ್ರದೇಶದಲ್ಲಿ ವಾಯುಮಂಡಲದಲ್ಲಿ ಅತಿ ಕಡಿಮೆ ವಾಯು ಇರುವ ಕಾರಣ ಸೂರ್ಯನ ಕಿರಣಗಳು ನೇರವಾಗಿ ನಮ್ಮ ಮೇಲೆ ಬಿದ್ದಾಗ, ಸ್ವಲ್ಪ ಪ್ರಮಾಣದ ‘ಅಲ್ಟ್ರಾವೈಲೆಟ್’ ಕಿರಣಗಳೂ ತಗಲುತ್ತವೆ. ಅಡೆ-ತಡೆಗಳಿಲ್ಲದೆ ನೇರವಾಗಿ ತಾಗುವ ಸೂರ್ಯನ ಕಿರಣಗಳು, ಮರ-ಗಿಡಗಳಿಲ್ಲದೆ ತಂಪಾದ ಗಾಳಿಯ ಹಾಗೂ ನೆರಳಿನ ಕೊರತೆ, ಈ ಕಾರಣಗಳಿಂದಾಗಿ ಹಿಮದಿಂದ ಕೂಡಿದ್ದ ಪ್ರದೇಶವಾದರೂ ಬೆಳಗಿನ ಹೊತ್ತು ತಡೆಯಲಾರದ ಶೆಖೆ. ಸಂಪೂರ್ಣ ಬಿಳಿ ಪ್ರದೇಶವಾದ ಕಾರಣ ಬೆಳಕು ಅತೀ ಹೆಚ್ಚು ಪ್ರಕಾಶಮಾನತೆಯಿಂದ ಪ್ರತಿಬಿಂಬಿಸುತ್ತಿತ್ತು. ಕಣ್ಣನ್ನು ಇದರಿಂದ ರಕ್ಷಿಸಿಕೊಳ್ಳಲು ‘ಕೂಲಿಂಗ್ ಗ್ಲಾಸ್’ ಹಾಕಲೇಬೇಕು. ಬಿಸ್ಕೇರಿ ಎಂಬ ಕ್ಯಾಂಪಿಗೆ ನಾವು ಅಂದು ಸಂಜೆ ತಲುಪಬೇಕಿತ್ತು. ಅದು ಸಮುದ್ರ ಮಟ್ಟದಿಂದ ಸುಮಾರು 11 ಸಾವಿರ ಅಡಿಯಲ್ಲಿದೆ. ನಾವು ಅಲ್ಲಿಗೆ ತಲುಪಲು ಈಗ ಇದ್ದ 13,800 ಅಡಿಯಿಂದ ಕೆಳಗೆ ಇಳಿಯಬೇಕಿತ್ತು. ಚಾರಣದಲ್ಲಿ ಮೇಲೆ ಹತ್ತುವುದಕ್ಕಿಂತ ಕೆಳಗೆ ಇಳಿಯುವುದೇ ಬಹಳ ಕಷ್ಟ, ಜಾರಿ ಬೀಳುವ ಸಾಧ್ಯತೆ ಹೆಚ್ಚು. ಆದರೆ ಆಶ್ಚರ್ಯವೆÉಂದರೆ ಹಿಮ ಆವರಿತ ಪರ್ವತಗಳಲ್ಲಿ ಇಳಿಯುವ ಅವಶ್ಯಕತೆ ಇಲ್ಲ. ಜಾರ್‍ಬಂಡಿಯಲ್ಲಿ ಜಾರುವ ಹಾಗೆ ಜಾರಬೇಕು. ತಿಲಾ ಲೋಟನಿ ಪರ್ವತದಿಂದ ಸುಮಾರು 1 ಕಿ.ಮೀ ಚಲಿಸಿದ ನಂತರ ಸ್ವಲ್ಪ ಇಳಿಜಾರು. ಸುಮಾರು ಅರ್ಧ ಕಿ.ಮೀ ನಷ್ಟು ಕೆಳಗೆ ಇಳಿಯಬೇಕಿತ್ತು. ಜಾರಲು ದಾರಿ ಮಾಡಲಾಗಿತ್ತು. ಇಲ್ಲಿ ನಮ್ಮ ಗೈಡ್‍ಗಳ ಮಾರ್ಗದರ್ಶನದಂತೆ 2 ಕಾಲುಗಳನ್ನು ಮೇಲೆ ಮಾಡಿ, 2 ಕೈಗಳನ್ನು ತಲೆಯ ಮೇಲೆ ಅಥವಾ ಕೋಲು ಹಿಡಿದುಕೊಂಡಿದ್ದರೆ, ಅದನ್ನು ಅಡ್ಡವಾಗಿ ತಲೆಯ ಹಿಂದೆ ಇಟ್ಟು ಜಾರಬೇಕು. ಯಾವುದೇ ಕಾರಣಕ್ಕೂ ನೇರವಾಗಿ ಕುಳಿತುಕೊಳ್ಳಬಾರದು, ತಲೆಯು ಆಕಾಶದತ್ತ ಇರಬೇಕೆಂದಿದ್ದರು. 68 ಜನ ಒಬ್ಬರ ನಂತರ ಒಬ್ಬರು ಜಾರುವ ಕಾರ್ಯ ಆರಂಭವಾಯಿತು. ಇದರಲ್ಲಿ ಕನಿಷ್ಟ 30 ಜನರಾದರೂ ಉರುಳಿ ಬೀಳುವ ದೃಶ್ಯವನ್ನು ಮೇಲಿನಿಂದ ಕಂಡು ಆನಂದಿಸಿದೆನು. ನನ್ನ ಸರದಿ ಬಂತು. ತಲೆಗೆ ಗಟ್ಟಿಯಾಗಿ ಕ್ಯಾಮರಾ ಸಿಕ್ಕಿಸಿಕೊಂಡು ಅರ್ಧದಾರಿ ಹೋದ ನಂತರ ಯಾಕೋ ನೇರವಾಗಿ ಕೂರಬೇಕೆಂದು ಎನಿಸಿತು. ಹೀಗೆ ಮಾಡಿದ ತಕ್ಷಣ 3 ಪಲ್ಟಿ ಹೊಡೆದು ಕಣ್ಣಿಗೆ ಹಾಕಿಕೊಂಡಿದ್ದ ‘ಕೂಲಿಂಗ್ ಗ್ಲಾಸ್’ ಹಾರಿ ಹೋಯಿತು. ವಾಪಸು ಮೇಲೆ ಹೋಗಲು ಅಸಾಧ್ಯ. ಸದ್ಯ ಕ್ಯಾಮರವಾದರೂ ಉಳಿಯಿತಲ್ಲ ಎಂಬ ಸಂತಸ. ಗಾಯಗಳೇನೂ ಆಗಿರಲಿಲ್ಲ . ನನ್ನ ಹಿಂದೆ ಇದ್ದ ಕೆಲವು ಮಂದಿ ಜಾರಿ ಬೀಳುವುದನ್ನು ಕಂಡು ಮುಂದೆ ಸಾಗಿದೆವು. 100 ಮೀಟರ್ ಮುಂದೆ ಚಲಿಸಿದ ನಂತರ ಸಮತಟ್ಟಾದ ಜಾಗ. ಇದೇ ‘ಸರ್‍ಪಾಸ್’. ನಮ್ಮ ಚಾರಣದ ಹೆಸರು. ‘ಸರ್’ ಎಂದರೆ ಸರೋವರ. ಇದನ್ನು ದಾಟಿ ಹೋಗುವುದಕ್ಕೆ ‘ಸರ್‍ಪಾಸ್’ ಎನ್ನುತ್ತಾರೆ. ಸರೋವರದ ಮೇಲೆ 15 ಅಡಿ ಹಿಮ. ಈ ಸರೋವರ ಸದಾ ಹಿಮದಿಂದ ಆವರಿತಗೊಂಡಿರುತ್ತದೆ. ಆದ್ದರಿಂದ ಯಾವುದೇ ಅಪಾಯವಿರಲಿಲ್ಲ. (ಮುಂದುವರಿಯುವುದು)

? ಜಿ.ಆರ್. ಪ್ರಜ್ವಲ್