ಶನಿವಾರಸಂತೆ, ಮೇ 11: ಸಮೀಪದ ಗುಡುಗಳಲೆಯಲ್ಲಿ ಇರುವ ಬೆಲ್ ಸ್ಟಾರ್ ಇನ್‍ವೆಸ್ಟ್‍ಮೆಂಟ್ ಮತ್ತು ಫೈನಾನ್ಸ್ ಕಂಪೆನಿಯವರು ಶನಿವಾರಸಂತೆ ಹೋಬಳಿಯ ಹಲವು ಗ್ರಾಮದ ಮಹಿಳೆಯರಿಗೆ ಸಾಲ ಕೊಟ್ಟಿರುತ್ತಾರೆ.

ಲಾಕ್‍ಡೌನ್ ಹಿನ್ನೆಲೆ ಸರಕಾರ ಹಾಗೂ ಜಿಲ್ಲಾಧಿಕಾರಿಯವರು 3 ತಿಂಗಳವರೆಗೆ ಯಾವುದೇ ಸಾಲ ಕಟ್ಟುವಂತೆ ಇಲ್ಲ ಹಾಗೂ ಸಾಲಗಾರರಿಗೆ ತೊಂದರೆ ಕೊಡುವಂತೆ ಇಲ್ಲ ಎಂದು ಆದೇಶ ಜಾರಿ ಮಾಡಿದ್ದರೂ ಕಂಪೆನಿ ಮಹಿಳೆಯರಿಗೆ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿರುವ ಕರವೇ (ಶಿವರಾಮೇ ಗೌಡರ ಬಣ) ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ಮನವಿಗೆ ಸ್ಪಂದಿಸಿ ಗುಡುಗಳಲೆ ಕಚೇರಿಗೆ ಭೇಟಿ ನೀಡಿದ ಕರವೇ ಕಾರ್ಯಕರ್ತರು ವ್ಯವಸ್ಥಾಪಕ ಉಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ನೆರೆ ಜಿಲ್ಲೆಯಿಂದ ಯಾರೂ ಬರುವಂತಿಲ್ಲವಾದರೂ, ಆದೇಶ ಉಲ್ಲಂಘಿಸಿ ಸಾಲ ವಸೂಲಾತಿಗೆ ಬಂದ ಉಮೇಶ್ ಅವರ ಕೊರೊನಾ ಪರೀಕ್ಷಾ ವರದಿ ಕೇಳಿದರು. ವರದಿ ಇಲ್ಲವೆಂದಾಗ ಹಂಡ್ಲಿ ಗ್ರಾ.ಪಂ. ಕಾರ್ಯದರ್ಶಿ ಯವರಿಗೆ ದೂರು ಸಲ್ಲಿಸಿದರು.

ಕಾರ್ಯದರ್ಶಿಯವರು ಕಂಪೆನಿ ವ್ಯವಸ್ಥಾಪಕ ಉಮೇಶ್ ಸರಕಾರದ ಆದೇಶ ಉಲ್ಲಂಘಿಸಿ ನೆರೆ ಜಿಲ್ಲೆಯಿಂದ ಬಂದಿರುವುದನ್ನು ಖಂಡಿಸಿ, ಕಚೇರಿ ಉಚ್ಚುವಂತೆ ಹಾಗೂ ಲಾಕ್‍ಡೌನ್ ಇರುವ ತನಕ ಬರಬಾರದೆಂಬುದಾಗಿ ಎಚ್ಚರಿಸಿರುತ್ತಾರೆ.

ಉಮೇಶ್ ಕಚೇರಿ ಮುಚ್ಚಿ ಕ್ಷಮೆ ಕೋರಿ ತೆರಳಿದರು ಎಂಬದಾಗಿ ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ತಿಳಿಸಿದ್ದಾರೆ. ಕಾರ್ಯದರ್ಶಿ ಪ್ರವೀಣ್, ಸದಸ್ಯರಾದ ರಮೇಶ್, ರಂಜಿತ್, ರಕ್ಷಿತ್, ಹೋಬಳಿ ಅಧ್ಯಕ್ಷ ಆನಂದ್, ಗ್ರಾಮ ಘಟಕದ ಅಧ್ಯಕ್ಷ ಹರೀಶ್, ಶರತ್, ರಾಜಣ್ಣ, ಅಭಿ, ಮಂಜು, ಮಧು, ಮೋಹನ್, ಅರುಣ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.