ಶ್ರೀಮಂಗಲ, ಮೇ 11: ದಕ್ಷಿಣ ಕೊಡಗಿನ ಮೂಲಕ ಅಂತರರಾಜ್ಯ ಹೆದ್ದಾರಿ ಶ್ರೀಮಂಗಲ-ಕುಟ್ಟ ನಡುವೆ ಕಾಯಿಮಾನಿಯಲ್ಲಿ ದೊಡ್ಡ ತೋಡಿಗೆ ನಿರ್ಮಿಸಿದ್ದ ಹಳೆಯ ಸೇತುವೆಯನ್ನು ಕೆಡವಿ ನೂತನ ಸೇತುವೆ ನಿರ್ಮಿಸುವ ಕಾಮಗಾರಿ ಲಾಕ್‍ಡೌನ್‍ನಿಂದ ಸ್ಥಗಿತವಾಗಿದೆ. ಇದರಿಂದ ಮಳೆಗಾಲಕ್ಕೆ ಮುನ್ನ ಈ ಕಾಮಗಾರಿ ಪೂರ್ಣವಾಗದಿದ್ದರೆ ಈ ರಸ್ತೆ ಸಂಪರ್ಕ ಕಡಿತವಾಗಬಹುದು.
ಪೆÇನ್ನಂಪೇಟೆಯಿಂದ ಶ್ರೀಮಂಗಲ ಮೂಲಕ ಕುಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಾಗಿರುವ ಈ ರಸ್ತೆಯು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿಯು ಆಗಿದೆ. ಕಾಯಿಮಾನಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ಕೆಡವಿ ಹೊಸ ಸೇತುವೆ ನಿರ್ಮಿಸಲು ಮುಂದಾಗಿತ್ತು. ಲಾಕ್‍ಡೌನ್ ಆಗುವ ಒಂದು ವಾರದ ಮೊದಲು ಈ ಕಾಮಗಾರಿ ಆರಂಭವಾಯಿತು. ಈ ಸಂದರ್ಭ ತುಂಬಾ ಹಳೆಯದಾದ ಸೇತುವೆಯನ್ನು ಯಂತ್ರದ ಮೂಲಕ ಸಂಪೂರ್ಣವಾಗಿ ಎಳೆದು ಹೊಸ ಸೇತುವೆ ನಿರ್ಮಿಸಲು ಸಿದ್ಧತೆ ನಡೆಯುತ್ತಿತ್ತು.
ಮೈಸೂರಿನ ಗುತ್ತಿಗೆದಾರ ರಮೇಶ್ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಲಾಕ್‍ಡೌನ್ ಆದ ಕಾರಣ ಕಾಮಗಾರಿ ಸ್ಥಗಿತವಾಯಿತು. ರೂ. 70 ಸಾವಿರ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಹಳೆಯ ಸೇತುವೆಯನ್ನು ಕೆಡವಿದ ನಂತರ ಸಮೀಪದಲ್ಲಿಯೇ ಮೋರಿ ಹಾಕಿ ಮರಳು ಚೀಲಗಳನ್ನು ನಿರ್ಮಿಸಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಮಳೆಗಾಲದಲ್ಲಿ ತಾತ್ಕಾಲಿಕ ರಸ್ತೆ ಕುಸಿಯುವ ಅಪಾಯವಿದೆ. ಆದ್ದರಿಂದ ಮಳೆಗಾಲ ಮುನ್ನ ಈ ಸೇತುವೆ ಕಾಮಗಾರಿ ಪೂರ್ಣವಾಗದಿದ್ದರೆ ಈ ರಸ್ತೆ ಸಂಪರ್ಕ ಕಡಿತವಾಗುವ ಆತಂಕ ಇದೆ.