ಸೋಮವಾರಪೇಟೆ, ಮೇ 11: ಅಕ್ರಮವಾಗಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಪೊಲೀಸರು ಧಾಳಿ ನಡೆಸಿದ್ದು, ಪಣಕ್ಕಿಟ್ಟಿದ್ದ ನಗದು ಸೇರಿದಂತೆ ಸ್ಥಳದಲ್ಲಿದ್ದ 3 ಬೈಕ್‍ಗಳ ಸಹಿತ ಈರ್ವರನ್ನು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಸಂಜೆ 7.30ರ ಸುಮಾರಿಗೆ ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಸ್ಮಶಾನದ ಕಾಡಿನೊಳಗೆ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿ ಮೊಬೈಲ್ ಬೆಳಕಿನ ಸಹಾಯದಿಂದ ಇಸ್ಪೀಟ್ ಆಡುತ್ತಿದ್ದ ಮಂದಿ ಕಾಡಿನೊಳಗೆ ಓಡಲು ಪ್ರಾರಂಭಿಸಿದ್ದು, ಬೆನ್ನಟ್ಟಿದ ಪೊಲೀಸರು ಬಜೆಗುಂಡಿ ಗ್ರಾಮದ ಸುರೇಶ್ ಮತ್ತು ಮುಸ್ತಫ ಅವರುಗಳ ಸಹಿತ ಪಣಕ್ಕಿಟ್ಟಿದ್ದ 3420 ನಗದು, ಸ್ಥಳದಲ್ಲಿದ್ದ ಮೂರು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಕಾರ್ಯಾಚರಣೆ ಸಂದರ್ಭ ಬಜೆಗುಂಡಿ ಗ್ರಾಮದ ಶಿವಣ್ಣ, ಕರ್ಕಳ್ಳಿಯ ಮಧು, ಗಾಂಧಿ ನಗರದ ಕೃಷ್ಣ, ಅಮ್ಮಣ್ಣ ಆಟೋ ವರ್ಕ್ ಸಮೀಪದ ನಿವಾಸಿ ಬಿ. ಮಂಜು ಅವರುಗಳು ಓಡಿ ತಪ್ಪಿಸಿಕೊಂಡಿದ್ದಾರೆ.

ಎಲ್ಲರ ವಿರುದ್ಧ ಸೋಮವಾರ ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿಗಳಾದ ವಸಂತ, ಮಧು, ನವೀನ್, ಜಗದೀಶ್, ಶಿವಕುಮಾರ ಅವರುಗಳು ಭಾಗವಹಿಸಿದ್ದರು.