ಚೆಟ್ಟಳ್ಳಿ, ಮೇ 9: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈರಳೆವಳ ಮುಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಬೇಸತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆ ಕಾಡಾನೆಗಳ ಹಿಂಡು ಕಾಫಿತೋಟಗಳಲ್ಲಿ ಬೀಡು ಬಿಟ್ಟಿದ್ದು ಅಡಿಕೇರ ಜಯಮುತ್ತಪ್ಪ ಅವರ ಅಡಿಕೆ ತೋಟಕ್ಕೆ ನುಗ್ಗಿ ಬೆಳೆದು ನಿಂತ ಸುಮಾರು 100 ಅಡಿಕೆ ಗಿಡಗಳನ್ನು ನಾಶಪಡಿಸಿದೆ.

ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಸ್ಥಳಕ್ಕೆ ಭೇಟಿ ನೀಡಿದರು. ಅರಣ್ಯ ಇಲಾಖೆ ಶೀಘ್ರವೇ ಎಚ್ಚೆತ್ತುಕೊಂಡು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಮೂಲಕ ರೈತರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು. ಅತೀ ಶೀಘ್ರದಲ್ಲಿ ಕಾಡಾನೆಯಿಂದಾದ ನಷ್ಟದ ಪರಿಹಾರವನ್ನು ರೈತರಿಗೆ ನೀಡಬೇಕೆಂದು ಒತ್ತಾಯಿಸಿದರು.