ಕುಶಾಲನಗರ, ಮೇ 9: ಇಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ಇದೆ. ಕಟ್ಟಡದಲ್ಲಿ ವೈದ್ಯಾಧಿಕಾರಿಗಳ ಕೊಠಡಿ, ಮೇಜರ್ ಶಸ್ತ್ರಚಿಕಿತ್ಸೆ, ಪ್ರಸೂತಿ ವಿಭಾಗ, ಔಷಧಾಲಯ, ಡ್ರೆಸ್ಸಿಂಗ್ ಕೊಠಡಿ, ಉಗ್ರಾಣ, ಕಚೇರಿ, ಪ್ರಯೋಗಾಲಯ, ಶವಾಗಾರ.... ಎಲ್ಲವೂ ಇದೆ. ವೈದ್ಯರಿಗೆ, ದಾದಿಯರಿಗೆ, ಸಹಾಯಕರಿಗೆ ಉಳಿದುಕೊಳ್ಳಲು ವಸತಿಗೃಹ ವ್ಯವಸ್ಥೆ ಕೂಡ ಸರಕಾರ ಕಲ್ಪಿಸಿದೆ. ಆದರೆ ಇಲ್ಲಿ ರೋಗಿಗಳನ್ನು ಉಪಚರಿಸಲು ಬೇಕಾದ ವೈದ್ಯರು ಮಾತ್ರ ಲಭ್ಯವಿಲ್ಲ. ಇದು ಪಿರಿಯಾಪಟ್ಟಣ ತಾಲೂಕಿನ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಾಸ್ತವ ಸ್ಥಿತಿ.

ಈ ಆಸ್ಪತ್ರೆಗೆ ಗ್ರಾಮಗಳ ಸುತ್ತಮುತ್ತಲ ಪ್ರದೇಶಗಳಿಂದ ದಿನನಿತ್ಯ 150 ರಿಂದ 200 ರೋಗಿಗಳು ತಮ್ಮ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಬರುತ್ತಾರೆ. ಇವರನ್ನೆಲ್ಲಾ ಇಲ್ಲಿ ಇರುವ ಇಬ್ಬರು ದಾದಿಯರು ಆರೈಕೆ ಮಾಡಬೇಕು, ಚಿಕಿತ್ಸೆ ನೀಡಬೇಕು. ಈ ನಡುವೆ ಗರ್ಭಿಣಿಯರ ಪರೀಕ್ಷೆ, ಮಕ್ಕಳ ಪರೀಕ್ಷೆ ಸೇರಿದಂತೆ ರಾಜ್ಯ, ಕೇಂದ್ರ ಸರಕಾರಗಳ ಎಲ್ಲಾ ಯೋಜನೆಗಳ ಫಲಾನುಭವಿಗಳನ್ನು ಆರೈಕೆ ಮಾಡಬೇಕು.

ಕಳೆದ ಕೆಲವು ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ನೂತನ ಆಸ್ಪತ್ರೆ ಎಂಬಿಬಿಎಸ್ ಪದವಿ ಮುಗಿಸಿ ಪಟ್ಟಣದಿಂದ ಬರುವ ಕಡ್ಡಾಯ ನಿಯೋಜನೆಗೊಳಗಾಗುವ ಗ್ರಾಮೀಣ ಪ್ರದೇಶದ ಅನುಭವ ಹೊಂದಲು ಆರೋಗ್ಯ ಇಲಾಖೆಗೆ ಸೇರ್ಪಡೆಗೊಳ್ಳುವ ತರಬೇತಿ ಡಾಕ್ಟರ್‍ಗಳಿಗೆ ಒಂದು ವರ್ಷದ ಅವಧಿಗೆ ಮೀಸಲಾಗಿರುವ ಕೇಂದ್ರ ಎನಿಸಿಕೊಂಡಿದೆ.

ಕಳೆದ ಕೆಲವು ವರ್ಷಗಳಿಂದ ಒಂದು ವರ್ಷ ಅವಧಿಗೆ ಗ್ರಾಮೀಣ ಸೇವೆ ಮಾಡಿ ಮತ್ತೆ ತಮ್ಮ ತವರೂರಿಗೆ ತೆರಳಿದ ವೈದ್ಯರ ಸಂಖ್ಯೆ ಮಾತ್ರ ಇಲ್ಲಿ ಏರತೊಡಗಿದೆ. ಆದರೆ ಗ್ರಾಮೀಣ ಭಾಗದ ಬಡ ರೋಗಿಗಳಿಗೆ ಆರೈಕೆ ಮಾಡುವ ಉದ್ದೇಶದಿಂದ ಇಲ್ಲಿಗೆ ವೈದ್ಯರುಗಳ ನಿಯೋಜನೆ ಆಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ತಮ್ಮ ಗ್ರಾಮೀಣ ಸೇವೆ ದಾಖಲೆಯೊಂದಿಗೆ ಮೂಲಸ್ಥಾನಕ್ಕೆ ಹಿಂತಿರುಗುವುದು ಇಲ್ಲಿಗೆ ಬಂದ ವೈದ್ಯರುಗಳ ಕಾಯಕವಾಗಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಇಲ್ಲಿ ಸೇವೆ ಸಲ್ಲಿಸಿ ಇದೀಗ ಪಕ್ಕದ ಗ್ರಾಮವೊಂದಕ್ಕೆ ವರ್ಗವಾಗಿರುವ ವೈದ್ಯರೊಬ್ಬರು ಈ ಆಸ್ಪತ್ರೆಯ ಆವರಣದಲ್ಲಿರುವ ವಸತಿಗೃಹದಲ್ಲಿ ಇನ್ನೂ ಉಳಿದಿರುವ ಕಾರಣ ಈ ಊರಿನ ರೋಗಿಗಳು ಅವರನ್ನು ರಾತ್ರಿ ಭೇಟಿ ಮಾಡಿ ತಮ್ಮ ಆರೋಗ್ಯ ತಪಾಸಣೆಗೆ ತೆರಳುವ ಅವಕಾಶ ಹೊಂದಿದ್ದಾರೆ. ಇಲ್ಲದಿದ್ದಲ್ಲಿ ಸಮೀಪದ ಕುಶಾಲನಗರದ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳನ್ನು ನಂಬಿಕೊಂಡು ಬದುಕುವ ಆತಂಕದ ಸ್ಥಿತಿ ಇಲ್ಲಿನ ಬಡ ರೋಗಿಗಳದ್ದಾಗಿದೆ. ಆದರೆ ಕೊರೊನಾ ಹಿನ್ನೆಲೆ ಲಾಕ್‍ಡೌನ್ ನಂತರ ಕುಶಾಲನಗರ ಕಡೆಗೆ ಬರುವ ರೋಗಿಗಳನ್ನು ಕುಶಾಲನಗರ ಪೊಲೀಸ್ ತಪಾಸಣಾ ಕೇಂದ್ರದಿಂದ ಬಿಡದಿರುವುದು ರೋಗಿಯ ಜೀವಕ್ಕೆ ಕುತ್ತು ತರುವಂತಹ ಪರಿಸ್ಥಿತಿಯನ್ನು ಸೃಷ್ಠಿಸಿದೆ. ಇನ್ನು ದೂರದ ಪಿರಿಯಾಪಟ್ಟಣ ಮೈಸೂರು ಕಡೆಗೆ ಸಾಗಬೇಕೆಂದರೆ ರೋಗಿಯ ಜೀವ ಅಪಾಯದ ಅಂಚಿನಲ್ಲಿರುತ್ತದೆ.

ಇದೆಲ್ಲಾ ಆವಾಂತರದ ನಡುವೆ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಇಡೀ ಆಸ್ಪತ್ರೆಯನ್ನು ನೋಡಿಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ. ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಕೊಳ್ಳಬೇಕಾದರೆ ದೂರದ ಪಿರಿಯಾಪಟ್ಟಣದಿಂದ ವಾರಕ್ಕೊಮ್ಮೆ ಬರುವ ತಂತ್ರಜ್ಞರ ಆಗಮನಕ್ಕೆ ಬಕಪಕ್ಷಿಯಂತೆ ಕಾಯಬೇಕು. ಗರ್ಭಿಣಿಯರು ಇಲ್ಲಿ ದಿನನಿತ್ಯ ಬಂದು ಕಾಯುತ್ತಿರುವ ಬವಣೆಯ ದೃಶ್ಯ ನಿಜಕ್ಕೂ ಹೇಳತೀರದು.

ಕೂಡಲೇ ಆರೋಗ್ಯ ಇಲಾಖೆ ಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರೊಬ್ಬರನ್ನು ನೇಮಿಸುವ ಮೂಲಕ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಗೆ ಮೇಜರ್ ಸರ್ಜರಿ ಮಾಡಿ ಬಡ ರೋಗಿಗಳನ್ನು ರಕ್ಷಿಸಬೇಕಾಗಿದೆ.

- ಚಂದ್ರಮೋಹನ್