ಇಂದು ಮುಖ್ಯಮಂತ್ರಿಗಳೊಂದಿಗೆ ಕಾನ್ಫರೆನ್ಸ್

ನವದೆಹಲಿ, ಮೇ 10: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಲಾಕ್‍ಡೌನ್ ಜಾರಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ 5ನೇ ಬಾರಿಗೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಮೂಲಕ ಸಭೆ ನಡೆಸಲಿದ್ದು, ಹಂತ ಹಂತವಾಗಿ ಆರ್ಥಿಕ ಚಟುವಟಿಕೆ ಪುನರ್ ಆರಂಭ, ಕೊರೊನಾ ನಿರ್ವಹಣೆ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸೇರಿದಂತೆ ಗೃಹ ಮತ್ತು ಆರೋಗ್ಯ ಕಾರ್ಯದರ್ಶಿ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರದಿಂದ ಶೀಘ್ರ ಮತ್ತೊಂದು ಪ್ಯಾಕೇಜ್

ನವದೆಹಲಿ, ಮೇ 10: ಕೊರೊನಾ ಸಂಕಷ್ಟ ಮತ್ತು ಲಾಕ್‍ಡೌನ್‍ನಿಂದ ತೊಂದರೆಗೆ ಸಿಲುಕಿದ ದೇಶದ ಬಡವರ ಕಷ್ಟ ನಿವಾರಣೆಗಾಗಿ ಕೇಂದ್ರ ಶೀಘ್ರದಲ್ಲೇ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಜನತೆಗೆ ಈಗಾಗಲೇ ಕೇಂದ್ರ ಸರ್ಕಾರವು ರೂ. 1.7 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಆರ್ಥಿಕತೆಯ ಸುಧಾರಣೆಗೆ ಸರ್ಕಾರ ಮುಂದಿನ ವಾರ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದು ಪ್ಯಾಕೇಜ್ ಘೋಷಣೆ ಸಂಬಂಧ ಕಳೆದ ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದು, ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಪ್ರಧಾನಿ ಕಾರ್ಯಾಲಯ ಸಿದ್ಧತೆ ನಡೆಸುತ್ತಿದೆ ಎಂದೂ ಹೇಳಲಾಗಿದೆ.

ಸಿಡಿಲಿನ ಹೊಡೆತಕ್ಕೆ ಬಾಲಕ ಬಲಿ

ಹೊಸಪೇಟೆ, ಮೇ 10: ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಬಾಲಕನೋರ್ವ ಬಲಿಯಾಗಿದ್ದಾನೆ. ಮಾದೂರು ಗ್ರಾಮದ ರಮೇಶ್ ಎನ್ನುವರ ಮಗು 10 ವರ್ಷದ ಅಜ್ಜಯ್ಯ ಸಿಡಿಲಿಗೆ ಬಲಿಯಾಗಿದೆ. ತಂದೆ ತಾಯಿ ಹೊಲದ ಕೆಲಸಕ್ಕೆ ಹೋದಾಗ ಬಾಲಕ ಅಜ್ಜಯ್ಯ ಕೂಡಾ ಹೋಗಿದ್ದ. ಮಳೆ ಬರ್ತಿದ್ದ ಹಿನ್ನೆಲೆ ಮರದ ಕೆಳಗೆ ನಿಂತಿದ್ದಾಗ ಬಾಲಕನಿಗೆ ಸಿಡಿಲು ಬಡಿದಿದೆ. ಕೂಡಲೇ ಸಮೀಪದ ಹಗರಿಬೊಮ್ಮನಹಳ್ಳಿ ಆಸ್ಪತ್ರೆಗೆ ಕರೆದೊಯ್ದರೂ ಬಾಲಕ ಬದುಕುಳಿಯಲಿಲ್ಲ.