ಚೆಟ್ಟಳ್ಳಿ, ಮೇ 8: ಮಡಿಕೇರಿಯ ಕೊಡಗು ಸೇವಾ ಕೇಂದ್ರವು 2018 ರ ಮಳೆ ಕಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಜನರ ಸೇವೆಗೆಂದು ಸಮಾನ ಮನಸ್ಕರು ಸೇರಿ ಆರಂಭಿಸಿದ ಸಂಸ್ಥೆಯಾಗಿದೆ. ಈ ಸಂಸ್ಥೆಯು ಸರಕಾರದ ಆಡಳಿತದ ಜೊತೆಗೂಡಿ ಹಲವರಿಗೆ ಸಹಾಯವನ್ನು ಮಾಡಿದೆ.
ಇತೀಚೆಗೆ ಕೊರೊನಾ ವೈರಸ್‍ನಿಂದ ಸಂಭವಿಸಿದ ಅನಿರೀಕ್ಷಿತ ಲಾಕ್‍ಡೌನ್‍ನಿಂದ ಹಲವಾರು ಜನರು ದಿನದ ಅಗತ್ಯ ಸಾಮಗ್ರಿ ಇಲ್ಲದೆ ಪರಿತಪಿಸುವಂತಾಗಿತ್ತು. ಸೂರ್ಲಬ್ಬಿ, ಮಂಕ್ಯ, ಮುಟ್ಲು ಗಳಂತಹ ಊರಿನಲ್ಲಿ ಜನರು ಬಸ್ಸಿನ ಸಂಚಾರವನ್ನೇ ಅವಲಂಬಿಸಿ ಮಾರು ಕಟ್ಟೆಗೆ ಹೋಗಿ ತಾವು ಬೆಳೆದ ತರಕಾರಿಯನ್ನು ಮಾರಿ ತಮ್ಮ ಮನೆಗೆ ಅಗತ್ಯ ಸಾಮಗ್ರಿಗಳನ್ನು ತರುತ್ತಿದ್ದರು.
ಆದರೆ ತಮ್ಮ ಊರಿಗೆ ಬಸ್ಸು ಇಲ್ಲದೆ ತಾವು ಬೆಳೆದ ತರಕಾರಿಗೆ ಬೆಲೆಯೂ ಇಲ್ಲದೆ, ಅಗತ್ಯ ವಸ್ತುಗಳು ಖಾಲಿ ಆಗಿ ದಿಕ್ಕೇ ತೋಚದ ಹಾಗಿತ್ತು.
ಇದನ್ನು ಮನಗಂಡ ಮಡಿಕೇರಿ ಯ ಕೊಡಗು ಸೇವಾ ಕೇಂದ್ರವು 400 ದಿನಸಿ ಸಾಮಗ್ರಿಗಳ ಕಿಟ್ಟನ್ನು ಗ್ರಾಮಸ್ಥರಿಗೆ ಉಚಿತವಾಗಿ ಹಂಚಿತು.
ಆಗ ಅಲ್ಲಿ ನೆರೆದ ಗ್ರಾಮಸ್ಥರು ತಾವು ಬೆಳೆದ ತರಕಾರಿಯನ್ನು ಹೊರಗಿನ ಜನರು ಗ್ರಾಮಕ್ಕೆ ಬಂದು ಅಲ್ಪ ಬೆಲೆ ಗೆ ಖರೀದಿಸಲು ಹವಣಿಸುತ್ತಿರುವುದಾಗಿ ಸೇವಾಕೇಂದ್ರದ ಪದಾಧಿಕಾರಿಗಳ ಗಮನ ಸೆಳೆದಿದ್ದರು.
ಇದನ್ನು ಮನಗಂಡ ಸೇವಾಕೇಂದ್ರವು, ಮಡಿಕೇರಿಯ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಸದಸ್ಯರ ಜೊತೆ ಸಮಾಲೋಚಿಸಿ ಗ್ರಾಮದ ರೈತರು ಬೆಳೆದ ತರಕಾರಿಗಳನ್ನು, ಮಡಿಕೇರಿಯ ಕೊಡವ ಸಮಾಜದ ಸಂಕೀರ್ಣದಲ್ಲಿ ವಾರದ ಎರಡು ದಿನ ಇಟ್ಟುಕೊಂಡು ಮಾರುವಂತೆ ತೀರ್ಮಾನಿಸಿದರು. ಅದರಂತೆ ರೈತರು ಈದಿನ ಬಂದು ತಮ್ಮ ನಾಡಿನ ತರಕಾರಿಗಳನ್ನು ಒಂದು ಕೆಜಿ ಮತ್ತು ಅರ್ಧ ಕೆ.ಜಿ.ಯಂತೆ ಪ್ಯಾಕೆಟ್ ಮಾಡಿ ವ್ಯಾಪಾರ ನಡೆಸಿದರು.
ವ್ಯಾಪಾರವು ಭರ್ಜರಿಯಾಗಿ ನಡೆದು ರೈತರು ದುಪ್ಪಟ್ಟು ಲಾಭವನ್ನು ಮಾಡಿದರು ಸಾರ್ವಜನಿಕರಿಗೆ ಮಾತ್ರ ಬೇರೆಡೆ ಹೋಲಿಸಿದರೆ ಅತೀ ಕಡಿಮೆಗೆ ಜೈವಿಕ ಗೊಬ್ಬರ ಬಳಸಿ ಬೆಳೆದ ತರಕಾರಿ ದೊರೆಯಿತು.
ಮಡಿಕೇರಿ ಅಲ್ಲದೆ ಗೋಣಿಕೊಪ್ಪ ಪೆÇನ್ನಂಪೇಟೆಗೂ ತರಕಾರಿಗಳನ್ನು ಕಳುಹಿಸಿ ಮಾರಾಟ ಮಾಡಿ ಬಂದ ಹಣವನ್ನು ನೇರವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆಯನ್ನು ಕೊಡಗು ಸೇವಾ ಕೇಂದ್ರವು ಮಾಡಿತ್ತು. ಈ ವೇಳೆ ಸೇವಾಕೇಂದ್ರದ ಪದಾಧಿಕಾರಿಗಳಾದ ಅಜ್ಜಿನಂಡ ತಮ್ಮು ಪೂವಯ್ಯ, ತೇಲಪಂಡ ಪ್ರಮೋದ್ ಸೋಮಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ಮದನ್, ಬಿದ್ದಾಟಂಡ ತಮ್ಮಯ್ಯ, ಮಂದಪಂಡ ಸತೀಶ್ ಮುಂತಾದವರು ಹಾಜರಿದ್ದರು.