ಸೋಮವಾರಪೇಟೆ, ಮೇ 7: ಕೊರೊನಾ ಲಾಕ್‍ಡೌನ್‍ನಿಂದಾಗಿ ಕೂಲಿ ಕೆಲಸವೂ ಇಲ್ಲದೇ ತೀರಾ ಸಂಕಷ್ಟಕ್ಕೆ ಸಿಲುಕಿದ್ದ ಪಟ್ಟಣ ವ್ಯಾಪ್ತಿಯ ಬಡ ರೋಗಿಗಳಿಗೆ ಗುತ್ತಿಗೆದಾರ ಎನ್.ಡಿ. ಸಂಪತ್ ಅವರು ಅಗತ್ಯ ಔಷಧಿಯನ್ನು ಉಚಿತವಾಗಿ ವಿತರಿಸಿದರು.

ಬಹುತೇಕ ಔಷಧಿಗಳಿಗಾಗಿ ಮೈಸೂರಿಗೆ ತೆರಳಬೇಕಿದ್ದು, ಲಾಕ್‍ಡೌನ್ ಹಿನ್ನೆಲೆ ವಾಹನ ಸಂಚಾರವಿಲ್ಲದ್ದರಿಂದ ಬಡ ರೋಗಿಗಳ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಇದರೊಂದಿಗೆ ಕೂಲಿ ಕೆಲಸವೂ ಇಲ್ಲದ್ದರಿಂದ ಬಹುತೇಕ ಮಂದಿಗೆ ಔಷಧಿ ಖರೀದಿಸಲೂ ಹಣವಿರಲಿಲ್ಲ.

ಇದನ್ನು ಮನಗಂಡ ಸಂಪತ್ ಅವರು, ರೋಗಿಗಳಿಂದ ವೈದ್ಯರು ನೀಡಿರುವ ಔಷಧಿಗಳ ಪ್ರತಿ ಪಡೆದು, ಮೈಸೂರಿ ನಿಂದ ಔಷಧಿಗಳನ್ನು ತರಿಸಿದರು. ನಂತರ ಸ್ಥಳೀಯ ವೈದ್ಯರೊಂದಿಗೆ ಔಷಧಿ ಚೀಟಿಯಲ್ಲಿರುವ ಔಷಧಿಗಳನ್ನೇ ಖರೀದಿಸಲಾಗಿದೆಯೇ ಎಂಬದನ್ನು ದೃಢೀಕರಿಸಿಕೊಂಡು ರೋಗಿಗಳ ಮನೆಮನೆಗೆ ತೆರಳಿ ಔಷಧಿ ವಿತರಿಸಿ, ಸಂಕಷ್ಟದಲ್ಲಿ ಬಡಕುಟುಂಬಕ್ಕೆ ನೆರವಾದರು.