ದೇಶದ ಆರ್ಥಿಕತೆ ಕುಸಿಯುತ್ತಿರುವ ಹಂತ ದಲ್ಲಿ ಆರ್ಥಿಕತೆಯನ್ನೂ ಸಬಲ ಗೊಳಿಸಬೇಕು. ಇದೇ ಹೊತ್ತಿನಲ್ಲಿ ಹೆಚ್ಚುತ್ತಲೇ ಇರುವ ಕೊರೊನಾ ಸೋಂಕನ್ನು ನಿಯಂತ್ರಿಸಬೇಕು. ಆರ್ಥಿಕತೆ ಸಬಲಗೊಳ್ಳಬೇಕಾದರೆ ಎಲ್ಲಾ ರೀತಿಯ ಜನಜೀವನ ಪ್ರಾರಂಭಿಸಲೇಬೇಕು. ಜನಸಂಚಾರ ಪ್ರಾರಂಭವಾದರೆ ಮತ್ತೆ ಕೊರೊನಾ ರಣಕೇಕೆ ಹಾಕುವ ಆತಂಕ ಹೆಚ್ಚಿದೆ, ಇಂಥ ಸಂದಿಗ್ಧತೆಯಲ್ಲಿ ಭಾರತ ದೇಶ ಈಗ ಇದೆ. ಕೊರೊನಾ ಸೋಂಕು ಮತ್ತಷ್ಟು ವ್ಯಾಪಿಸಬಾರದು. ಆರ್ಥಿಕತೆಯೂ ತಳಕಚ್ಚ ಬಾರದು. ಈ ಪರಿಸ್ಥಿತಿಯನ್ನು ದೇಶದ ಆಡಳಿತಗಾರರು ನಿಭಾಯಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಪ್ರಸ್ತುತ, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 52,952ಕ್ಕೆ ಹೆಚ್ಚಿದ್ದು ಈ ಪೈಕಿ 15,288 ಜನ ಗುಣಮುಖರಾಗಿದ್ದಾರೆ. ಸೋಂಕಿನಿಂದ ದೇಶದಲ್ಲಿ 1783 ಜನ ಸಾವನ್ನಪ್ಪಿದ್ದಾರೆ. 34 ಸಾವಿರ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಕ್‍ಡೌನ್ ಸಡಿಲಿಕೆಯ ನಂತರ ಸೋಂಕು ಹೆಚ್ಚುತ್ತಲೇ ಇರುವುದು ಆರೋಗ್ಯ ಇಲಾಖೆಯ ಪ್ರಮುಖರ ಚಿಂತೆಗೆ ಕಾರಣವಾಗಿದೆ. ಭಾರತದಲ್ಲಿ ಲಾಕ್‍ಡೌನ್ 45 ದಿನ ಕ್ರಮಿಸಿದ್ದರೂ ಮಹಾಮಾರಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಾದರೆ ಹೇಗೆ ಇದಕ್ಕೆ ಕಡಿವಾಣ ಹಾಕುವುದು ಎಂಬ ಪ್ರಶ್ನೆಯೂ ಸರ್ಕಾರವನ್ನು ಕಾಡುತ್ತಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಬೇರೆ ದೇಶಗಳಿಗೆ ಹೋಲಿಸಿದರೆ ಕೊರೊನಾ ಸೋಂಕು ನಿಯಂತ್ರಣದಲ್ಲಿ ಭಾರತ ಗಮನಾರ್ಹ ಕ್ರಮಗಳನ್ನು ಈವರೆಗೂ ಕೈಗೊಳ್ಳುತ್ತಾ ಬಂದಿದೆ. ಎರಡೂ ಹಂತಗಳ ಲಾಕ್‍ಡೌನ್ ಅತ್ಯಂತ ಪರಿಣಾಮಕಾರಿಯಾಗಿತ್ತು. ಲಾಕ್‍ಡೌನ್‍ನಿಂದಾಗಿ ರಸ್ತೆಗಿಳಿಯದ ಜನರು ಸೋಂಕಿನ ಸುಳಿಗೆ ಸಿಲುಕಲಿಲ್ಲ. ಆದರೆ ಮೂರನೇ ಹಂತದ ಲಾಕ್‍ಡೌನ್ ನಿಯಮಾವಳಿಗಳನ್ನು ಸಡಿಲಗೊಳಿಸಿದ್ದು ದೇಶಕ್ಕೀಗ ಗಂಡಾಂತರಕಾರಿಯಾಗಿ ಪರಿಣಮಿಸುತ್ತಿದೆಯೇನೋ ಎಂಬ ಆತಂಕ ಕಂಡುಬರುತ್ತಿದೆ.

ಈ ಅಂಕಿಅಂಶಗಳನ್ನೊಮ್ಮೆ ಗಮನಿಸಿ : ಮಾರ್ಚ್ 5 ರಂದು ಭಾರತದಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ-30. ಮಾರ್ಚ್-14 - 114 ಸೋಂಕಿತರು. ಮಾರ್ಚ್-25- 657, ಮಾರ್ಚ್-31-1397, ಏಪ್ರಿಲ್ 5- 4289, ಏಪ್ರಿಲ್ 10-7600, ಏಪ್ರಿಲ್ 20-18,539, ಏಪ್ರಿಲ್ 30-34,863, ಮೇ 5- 49,400, ಮೇ 7- 52,960. ಇದೇ ಪ್ರಮಾಣದಲ್ಲಿ ಸಾಗಿದರೆ ಮುಂದಿನ ಭಾನುವಾರ ಅಂದರೆ ಮೇ 10 ಕ್ಕೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70,000 ತಲುಪಲಿದ್ದು, ಮೇ 20 ಕ್ಕೆ 1,40,000 ಕ್ಕೆ ಹೆಚ್ಚಲಿದೆ. ಮೇ ಅಂತ್ಯಕ್ಕೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷ ತಲುಪಲಿದೆ ಎಂಬ ಆತಂಕಕಾರಿ ಸುದ್ದಿ ಲಭಿಸಿದೆ. ಕರ್ನಾಟಕದ ಅಂಕಿಅಂಶ ಗಮನಿಸಿದರೆ. ಕಳೆದ 20 ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಪ್ರತೀ 1 ಕೋಟಿ ಜನಸಂಖ್ಯೆಗೆ ಮರಣ ಪ್ರಮಾಣ 4.7 ರಷ್ಟಿದೆ. ಕಳೆದ ಏಪ್ರಿಲ್‍ನಲ್ಲಿ ಇದು 2 ರಷ್ಟಿತ್ತು. ಅಂದರೆ ಕೇವಲ 1 ತಿಂಗಳಿನಲ್ಲಿಯೇ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ದುಪ್ಪಟ್ಟಾಗಿದೆ. ಪಕ್ಕದ ಕೇರಳದಲ್ಲಿ ಸಾವಿನ ಪ್ರಮಾಣ 1 ಕೋಟಿಗೆ 1.5 ರಷ್ಟಿದ್ದರೆ ಆಂಧ್ರದಲ್ಲಿ ಇದು 7.3, ತೆಲಂಗಾಣದಲ್ಲಿ 8.3, ತಮಿಳುನಾಡಿನಲ್ಲಿ 4.6 ಇದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಸಾಧನೆ ತೃಪ್ತಿದಾಯಕವಾಗಿದ್ದರೂ ಕೊರೊನಾ ಸೋಂಕಿತರ ಪ್ರಮಾಣ ಇತ್ತೀಚಿನ ಮೂರು ದಿನಗಳಲ್ಲಿ ಹೆಚ್ಚುತ್ತಲೇ ಇರುವುದು ಕಳವಳಕಾರಿಯಾಗಿದೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯ ಸಾಲಿನಲ್ಲಿ ಕರ್ನಾಟಕ, ದೇಶದಲ್ಲಿ 12 ನೇ ಸ್ಥಾನ ದಲ್ಲಿದೆ. ಪ್ರತೀ 1 ಕೋಟಿ ಜನ ಸೋಂಕಿತರಲ್ಲಿ 63 ಸಾವಿನ ಪ್ರಮಾಣದ ಮೂಲಕ ಗುಜರಾತ್ ದೇಶ ದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಸೋಂಕಿನಿಂದ ಕೊನೆಯುಸಿರೆಳೆದವರಲ್ಲಿ 60 ವರ್ಷ ಮೀರಿದವರ ಸಂಖ್ಯೆ ಶೇ.80 ರಷ್ಟಿದೆ. ಹಿರಿಯ ನಾಗರಿಕರಲ್ಲಿ ಸೋಂಕು ನಿರೋಧಕ ಶಕ್ತಿ ಕುಂದಿರುವುದರಿಂದಾಗಿ ಸೋಂಕಿನಿಂದ ಬೇಗನೇ ಚೇತರಿಸಿಕೊಳ್ಳಲಾಗದೇ ಕೊನೆಯುಸಿರೆಳೆಯುತ್ತಿದ್ದಾರೆ. ಜನರು ಗಮನಿಸಲೇಬೇಕಾದ ಎಚ್ಚರಿಕೆಯ ಅಂಶ ಎಂದರೆ. ಈವರೆಗೆ ಸೋಂಕು ತಗುಲಿದವರಲ್ಲಿ ಶೇ.75 ಜನರಿಗೆ ಸೋಂಕಿನ ಲಕ್ಷಣಗಳೇ ಇರಲಿಲ್ಲ. ! ಅಂದರೆ ಕೊರೊನಾ ಸೋಂಕಿನ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು, ಗಂಟಲು ಬೇನೆ ಇಲ್ಲದಿದ್ದರೂ ಸೋಂಕು ತಗುಲಿದ್ದು ದೃಢಪಟ್ಟಿದ್ದು ಇದು ವೈದ್ಯಲೋಕಕ್ಕೂ ಸವಾಲಾಗಿ ಪರಿಣಮಿಸಿದೆ. ಕರ್ನಾಟಕದಲ್ಲಿ 651 ಪ್ರಕರಣಗಳ ಪೈಕಿ 486 ಮಂದಿಗೆ ಸೋಂಕಿನ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಈವರೆಗೂ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಚಿಕಿತ್ಸೆ ಪಡೆಯಿರಿ ಎನ್ನುತ್ತಿದ್ದ ವೈದ್ಯಕೀಯ ರಂಗ ಇದೀಗ ಯಾವುದಕ್ಕೂ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ ಎನ್ನುವಂತಾಗಿದೆ. ಸಮಾಧಾನದ ಸಂಗತಿ ಎಂದರೆ ಕರ್ನಾಟಕದಲ್ಲಿ ಕೊರೊನಾ ಸೋಂಕುಪೀಡಿತರು ಬಹಳ ಬೇಗ ಗುಣಮುಖರಾಗುತ್ತಿದ್ದಾರೆ. ಈಗಾಗಲೇ ವರದಿಯಾದ ಸೋಂಕಿತರಲ್ಲಿ ಶೇ.50 ರಷ್ಟು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆ ಸೇರಿದ್ದಾರೆ. ಕರ್ನಾಟಕದಲ್ಲಿ ಸೋಂಕು ನಿರೋಧಕ ಶಕ್ತಿಯನ್ನು ಜನ ಹೊಂದಿದ್ದಾರೆ, ಇದು ನಿರೀಕ್ಷೆಗೂ ಮೀರಿದ್ದಾಗಿರುವುದು ಸಮಾಧಾನಕರ ಎಂದು ವೈದ್ಯಕೀಯ ಅಧ್ಯಯನ ವರದಿಗಳು ಹೇಳಿದೆ. ಆದರೆ ಇದೇ ಮತ್ತೊಂದು ಸಮಸ್ಯೆಗೂ ಕಾರಣವಾಗಿದೆ. ರೋಗ ಲಕ್ಷಣಗಳಿಲ್ಲದೇ ಸೋಂಕಿತರು ಸಾರ್ವಜನಿಕವಾಗಿ ಸಂಚರಿಸುತ್ತಿದ್ದರೆ ಅಂಥವರಿಂದ ಮತ್ತಷ್ಟು ಜನರಿಗೆ ಸೋಂಕು ತಗುಲುತ್ತಿದೆ. ಯಾವದೇ ಲಕ್ಷಣಗಳು ಕಂಡುಬಾರದೇ ಇರುವುದರಿಂದ ಯಾರಿಂದ ಹೇಗೆ ಯಾರಿಗೆ ಸೋಂಕು ತಗುಲಬಹುದು ಎಂದು ಊಹಿಸುವುದೇ ಸಮಸ್ಯೆ ಯಾಗಲಿದೆ. ಸೋಂಕು ತಗುಲಿದವರಲ್ಲಿ 20 ರಿಂದ 40 ವರ್ಷದವರ ಸಂಖ್ಯೆ 313 ಇದೆ. ಇದೂ ವೈದ್ಯರನ್ನು ಚಿಂತೆಗೀಡು ಮಾಡಿದೆ.

ಆಸ್ಪತ್ರೆಗೆ ತೆರಳಲೇಬೇಕಾದ ಯಾವುದೇ ರೋಗ ಲಕ್ಷಣ ಕಂಡುಬಾರದೆಯೂ ಕೊರೊನಾ ಸೋಂಕು ಬರಬಹುದು. ಇದೇ ಮುಂದಿನ ದಿನಗಳಲ್ಲಿ ಭಾರತಕ್ಕೆ ಬಹಳ ದೊಡ್ಡ ಸಾಂಕ್ರಾಮಿಕ ಹರಡುವಿಕೆಗೆ ಕಾರಣವಾಗಬಹುದು ಎಂಬ ಆತಂಕ ವೈದ್ಯಕೀಯ ರಂಗದಲ್ಲಿ ವ್ಯಕ್ತವಾಗುತ್ತಿದೆ. ಭಾರತ ಇನ್ನೂ ಕೊರೊನಾ ಹಿಡಿತದಿಂದ ಖಂಡಿತಾ ಪಾರಾಗಿಲ್ಲ. ನಾವಿನ್ನೂ ಪೂರ್ಣ ಪ್ರಮಾಣದ ಅಪಾಯದ ದಿನಗಳಿಗೆ ತಲುಪಿಲ್ಲ. ಲಾಕ್‍ಡೌನ್ ಅನ್ನು ಜನರ ಆರ್ಥಿಕತೆಯ ದೃಷ್ಟಿಯಿಂದ ಸಡಿಲಗೊಳಿಸಿ ದ್ದರೂ ಅದೇ ತಪ್ಪು ನಿರ್ಧಾರ ಆಗಿದೆಯೇನೋ ಎಂಬ ಪ್ರಶ್ನೆ ಕಾಡುತ್ತಿದೆ. ಲಂಗುಲಗಾಮಿಲ್ಲದಂತೆ ಪ್ರತೀ ದಿನವೂ ಸೋಂಕು ವ್ಯಾಪಿಸುತ್ತಲೇ ಇದೆ ಕರ್ನಾಟಕದ ಮುಖ್ಯಮಂತ್ರಿಯೇ ಹೇಳಿಕೆ ನೀಡಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ಜುಲೈ ಕೊನೆಯವರೆಗೂ ಕಾಡಬಹುದು.

ಕೊನೇ ಹನಿ

ಕೊರೊನಾದಿಂದ ತತ್ತರಿಸಿರುವ ವಿದೇಶಗಳಲ್ಲಿ ಕಳೆದ ಎರಡೂವರೆ ತಿಂಗಳಿ ನಿಂದ ಲಾಕ್‍ಡೌನ್ ಮುಂದುವರೆದೇ ಇದೆ. ಬಹುತೇಕ ದೇಶಗಳು 70ನೇ ದಿನದ ಲಾಕ್‍ಡೌನ್‍ನಲ್ಲಿದ್ದು ಮನೆಯೇ ಬಹುತೇಕರಿಗೆ ಕಾರ್ಯಕ್ಷೇತ್ರ ವಾಗಿದೆ. ಅಮೇರಿಕಾದಲ್ಲಿನ ಮಿತ್ರನೋರ್ವ ಹೇಳಿದ. ನೀವು ಭಾರತೀಯರು ನಿಜಕ್ಕೂ ಪುಣ್ಯವಂತರು. ನಿಮಗೆ ನಿಮ್ಮ ದೇಶ ಲಾಕ್‍ಡೌನ್ ಕಾನೂನು ಪಾಲಿಸಿ ಮನೆಯಲ್ಲಿಯೇ ಇರಿ ಎಂದು ಕಠಿಣ ಕಾನೂನು ರೂಪಿಸಿದೆ. ಇಲ್ಲಿ ಹಾಗಲ್ಲ. ದೇಶ ಆಳುವವರು ನಿಮ್ಮ ಜೀವ ನಿಮಗೆ ಬಿಟ್ಟದ್ದು, ಬೇಕಿದ್ದರೆ ಮನೇಲಿರಿ, ಇಲ್ಲದಿದ್ದರೆ ಹೊರಬನ್ನಿ. ಸೋಂಕು ತಗುಲಿ ಸತ್ತರೆ ಸರ್ಕಾರಕ್ಕೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ.

ನಿಜ. ಭಾರತ ದೇಶದಲ್ಲಿ ಪ್ರತಿಯೋರ್ವ ಪ್ರಜೆಯ ಜೀವವೂ ತನಗೆ ಮುಖ್ಯ ಎಂಬ ಮನೋಭಾವ ಸರ್ಕಾರಕ್ಕಿದೆ. ಹೀಗಾಗಿಯೇ ಲಾಕ್‍ಡೌನ್ ಕಾನೂನು ಪಾಲಿಸಿ, ನೀವು ಮಾತ್ರವಲ್ಲ ಪ್ರತಿಯೋರ್ವರೂ ಸುರಕ್ಷಿತರಾಗಿರಿ ಎಂದು ಪದೇ-ಪದೇ ಹೇಳುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ಭಾರತೀಯ ರಾಗಿ ನಾವೆಲ್ಲರೂ ಕಣ್ಣಿಗೆ ಕಾಣದ ವೈರಾಣು ಸೋಂಕಿನಿಂದ ರಕ್ಷಿಸಿಕೊಳ್ಳಬೇಕು. ನಮ್ಮನ್ನು ಮತ್ತು ದೇಶವನ್ನು ಕೊರೊನಾ ಸೋಂಕು ಮುಕ್ತವಾಗಿಸಲೇಬೇಕು.

ಭಾರತೀಯರಾಗಿ ಇದು ಪ್ರತಿಯೋರ್ವರ ಕರ್ತವ್ಯ ವಾಗಬೇಕು. ಲಾಕ್‍ಡೌನ್ ವಿನಾಯಿತಿ ಜನರಿಗೆ ಹೊರತು ಕೊರೊನಾಕ್ಕಲ್ಲ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ತಗುಲೀತು. ಎಚ್ಚರ.