ಮಡಿಕೇರಿ, ಮೇ 6: ರಾತ್ರಿ ವೇಳೆಯಲ್ಲಿ ಕುಡಿದ ಅಮಲಿನಲ್ಲಿ ಗಲಾಟೆ ಮಾಡಿಕೊಂಡಿದ್ದ ಮೂವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ವಿಚಾರಿಸಲಾಗಿ ಹಲ್ಲೆ ನಡೆಸಿರುವ ಮೇರೆಗೆ; ಕಾನೂನು ಕ್ರಮ ಜರುಗಿಸುವ ದರೊಂದಿಗೆ ಬಂಧಿಸಲಾಗಿದೆ. ತಾ. 4 ರಂದು ರಾತ್ರಿ ಅಬ್ಬಿಫಾಲ್ಸ್ ರಸ್ತೆಯಲ್ಲಿ ಗ್ರಾಮಾಂತರ ಠಾಣೆಯ ಸಿಬ್ಬಂದಿ ದಿನೇಶ್ ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿರುವ ಆರೋಪ ಮೇರೆಗೆ ತಾಳತ್‍ಮನೆಯ ಕೆ.ಓ. ಅಜಿತ್, ಇಲ್ಲಿನ ಸುದರ್ಶನ ವೃತ್ತ ಬಳಿಯ ಪಿ.ಜಿ. ಸೋಮಣ್ಣ ಹಾಗೂ ತಣ್ಣಿಮಾನಿಯ ಕೆ.ಆರ್. ಪವನ್ ಎಂಬವರನ್ನು ಬಂಧಿಸಲಾಗಿದೆ.

ತಾ. 4 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಟಿ.ಆರ್. ದಿನೇಶ್ ಉಸ್ತುವಾರಿಯಲ್ಲಿರು ವಾಗ್ಗೆ ರಾತ್ರಿ 10 ಗಂಟೆಗೆ ಅಬ್ಬಿಫಾಲ್ಸ್ ರಸ್ತೆಯಲ್ಲಿ ಯಾರೋ ಕುಡಿದು ಗಲಾಟೆ ಮಾಡುತ್ತಿರುವದಾಗಿ ಬಂದ ಮಾಹಿತಿ ಮೇರೆಗೆ ಮುಖ್ಯಪೇದೆ ದಿನೇಶ್, ಇನ್ನೋರ್ವ ಸಿಬ್ಬಂದಿ ಮೇದಪ್ಪ ಅವರೊಂದಿಗೆ ಬೈಕ್‍ನಲ್ಲಿ (ಕೆ.ಎ. 12 ಯು. 2059) ಹೋಗಿ ನೋಡಲಾಗಿ ರಸ್ತೆಯ ಮೋರಿಯ ಮೇಲೆ ಸುಮಾರು 8 ರಿಂದ 10 ಜನರು ಕುಳಿತುಕೊಂಡು ಮದ್ಯಪಾನ ಮಾಡುತ್ತಿರುವದು ಕಂಡು ಬಂತು. ಪಕ್ಕದಲ್ಲಿ ಒಂದು ಮಾರುತಿ ಎಸ್ಟಿಮ್ ಕಾರು (ಮೊದಲ ಪುಟದಿಂದ) (ಕೆ.ಎ. 53 ಎಂ. 0795) ರಸ್ತೆ ಬದಿಗೆ ಮಗುಚಿ ಬಿದ್ದಿತ್ತು. ಈ ಬಗ್ಗೆ ವಿಚಾರಿಸುತ್ತಿರುವಾಗ್ಗೆ ಅಲ್ಲಿದ್ದ ಮೂರು ಜನ ವ್ಯಕ್ತಿಗಳು ಏಕಾಏಕಿ ಸಿಬ್ಬಂದಿಯವರನ್ನು ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ಮಾಡಿರುತ್ತಾರೆ. ಈ ಸಂಬಂಧ ಸಿಬ್ಬಂದಿ ದಿನೇಶ್ ನೀಡಿದ ಪುಕಾರಿನ ಮೇರೆಗೆ ಠಾಣೆಯಲ್ಲಿ ಮೊ.ಸಂ. 57/2020 ಕಲಂ 504, 323, 332, 353 ರೆ/ವಿ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಸುಮನ್ ಡಿ.ಪಿ. ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷ ಬಿ.ಪಿ. ದಿನೇಶ್‍ಕುಮಾರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತದ ನಿರೀಕ್ಷಕ ಸಿ.ಎನ್. ದಿವಾಕರ್, ಉಪ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ತೀರ್ಥಕುಮಾರ್, ಪ್ರೇಮ್‍ಕುಮಾರ್, ಕಾಳಿಯಪ್ಪ, ಮಹೇಶ್, ದಿನೇಶ್, ಸೋಮಶೇಖರ್, ಹನೀಫ, ಕಲ್ಲಪ್ಪ ಹಿಟ್ನಾಳ್ ಮತ್ತು ಚಾಲಕ ಪ್ರವೀಣ್‍ಕುಮಾರ್ ಆರೋಪಿಗಳನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಕಾರನ್ನು (ಕೆ.ಎ. 12 ಪಿ. 7800) ವಶಕ್ಕೆ ಪಡೆದಿದ್ದಾರೆ. ಮೇಲ್ಕಂಡ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.