ಮಡಿಕೇರಿ, ಮೇ 6 : ಕೊಡಗು ಜಿಲ್ಲೆಯಲ್ಲಿ ಭತ್ತ ಕೃಷಿಯು ಲಾಭದಾಯಕವಾಗದೆ ಇರುವುದರಿಂದ ಹಲವು ರೈತರು ಭತ್ತ ಕೃಷಿಯ ಮಾಡುವುದನ್ನು ಕೈಬಿಟ್ಟಿದ್ದಾರೆ. ಭತ್ತ ಕೃಷಿಗೆ ಒತ್ತು ನೀಡುವ ದೃಷ್ಟಿಯಿಂದ ಪ್ರತಿ ಎಕರೆಗೆ ರೂ. 10 ಸಾವಿರದಂತೆ ಸಹಾಯಧನವನ್ನು ನೀಡಲು ಕ್ರಮ ಕೈಗೊಳ್ಳಬೇಕಾಗಿ ಮತ್ತು ಭತ್ತ ಕೃಷಿಯು ಹೆಚ್ಚಾದರೆ ಅಂತರ್ಜಲ ಮಟ್ಟವೂ ಸಹ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಕೃಷಿ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯ 16 ಹೋಬಳಿಗಳಲ್ಲಿ 3 ಹೋಬಳಿಯಲ್ಲಷ್ಟೆ ಕೃಷಿಧಾರ-ಯಂತ್ರೋಪಕರಣ ಯೋಜನೆ ಕಾರ್ಯಗತವಾಗುತ್ತಿದೆ. ಪ್ರಕೃತಿ ವಿಕೋಪ ಮತ್ತು ಕೊರೊನಾ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ರೈತರು ಕಂಗೆಟ್ಟಿದ್ದು, ಕೃಷಿ ಚಟುವಟಿಕೆಯಲ್ಲಿ ಚೇತರಿಕೆ ಸಾಧ್ಯವಾಗುತ್ತಿಲ್ಲ. ಎಲ್ಲಾ ಹೋಬಳಿಗಳಲ್ಲಿಯೂ ಬಾಡಿಗೆ ಆಧಾರಿತ ವ್ಯವಸಾಯ ಉಪಕರಣಗಳ ಗೋಡಾನ್‍ಗಳನ್ನು ನಿರ್ಮಾಣ ಮಾಡಿ ಕೊಡಗಿನ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಕೃಷಿ ಸಚಿವರಲ್ಲಿ ಮನವಿ ಕೋರಿದರು.

ಸ್ಪ್ರಿಂಕ್ಲರ್ ಪೈಪ್, ಟಾರ್ಪಲ್, ಸುಣ್ಣ, ಗೊಬ್ಬರ, ಕಳೆನಾಶಕ ಹಾಗೂ ಇತರ ಕೃಷಿ ಪರಿಕರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಹಾಯಧನ ರೂಪದಲ್ಲಿ ನೀಡಲು ಕ್ರಮವಹಿಸಿ. ಕೃಷಿ, ತೋಟಗಾರಿಕೆ ಬೆಳೆಗಳನ್ನು ಶೇಖರಣೆ, ಸಂರಕ್ಷಣೆ ಮಾಡಲು ಜಿಲ್ಲೆಯ ಪ್ರತಿ ಹೋಬಳಿಗೆ ತಲಾ ಒಂದು ಶೇಖರಣಾ ಘಟಕವನ್ನು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ರೈತ ಸಂಘದಿಂದ ಮನವಿ : ಕೊಡಗಿನ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಕಾರ್ಯ ನಿಮಿತ್ತ ಕೊಡಗು ಜಿಲ್ಲೆಗೆ ಭೇಟಿ ನೀಡಿದ ರಾಜ್ಯ ಕೃಷಿ ಸಚಿವರನ್ನು ಜಿಲ್ಲಾ ಪಂಚಾಯ್ತಿ ಭವನದಲ್ಲಿ ಭೇಟಿ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ವಿವರ ನೀಡಿದರು.

ಪ್ರಸ್ತುತ ರೈತರ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತನೆ, ಬಡ್ಡಿರಹಿತವಾಗಿ ಸಾಲ ನೀಡಲು ಬ್ಯಾಂಕ್‍ಗಳಿಗೆ ಶಿಫಾರಸ್ಸು, ಮಾಡಬೇಕೆಂದು ಮನವಿ ಮಾಡಿದ ರೈತ ಸಂಘದ ಪದಾಧಿಕಾರಿಗಳು ಜಿಲ್ಲೆಯಲ್ಲಿ ಬೆಳೆಯುವ ಕರಿಮೆಣಸು ಬೆಳೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ವಸೂಲು ಮಾಡುತ್ತಿರುವ ಸೆಸ್ ರದ್ದುಪಡಿಸಬೇಕು, ರೈತರು ಉಪಯೋಗಿಸುವ 10.ಹೆಚ್.ಪಿ.ಮೋಟರ್‍ಗೆ ಉಚಿತ ವಿದ್ಯುತ್‍ಶಕ್ತಿ ನೀಡಬೇಕು ಭತ್ತ ಬೆಳೆಯುವ ಮಲೆನಾಡು ಪ್ರದೇಶದ ಪ್ರತಿ ರೈತರಿಗೆ ಎಕರೆ ರೂ. 25000 ಪೋತ್ಸಾಹಧನ ಘೋಷಣೆಯಾಗಬೇಕು. ಆನೆ-ಮಾನವ ಸಂಘರ್ಷ ತಡೆಗಟ್ಟಲು ಶಾಶ್ವತ ಪರಿಹಾರ ಸಿಗುವಂತಾಗಬೇಕು, ಕಳೆದ ಎರಡು ವರ್ಷಗಳಿಂದ ಕಂದಾಯ ದಾಖಲಾತಿಗಳ ಕೆಲಸಗಳು ಯಾವುದು ನಡೆಯದಿರುವುದರಿಂದ ಕೂಡಲೇ ಪ್ರತ್ಯೇಕ ತಹಶೀಲ್ದಾರ್ ಅವರನ್ನು ನೇಮಿಸಿ ರೈತರ ದಾಖಲಾತಿಗಳನ್ನು ಸರಿಪಡಿಸಬೇಕು, ಜಿಲ್ಲೆಯಲ್ಲಿ ಹುಲಿ ಹಾವಳಿಯಿಂದ ರೈತರ ಜಾನುವಾರು ಬಲಿಯಾಗುತ್ತಿದ್ದು, ಇಲಾಖೆ ನೀಡುವ ಪರಿಹಾರ ಕನಿಷ್ಟ 50 ಸಾವಿರ ನಿಗದಿಯಾಗಬೇಕು, ವನ್ಯ ಜೀವಿಗಳಿಂದ ರೈತರು ಭೂಮಿಯಲ್ಲಿ ಬೆಳೆದ ಫಸಲು ನಾಶವಾಗುತ್ತಿದ್ದು ಈ ಬಗ್ಗೆ ನೀಡುವ ಪರಿಹಾರ ಹೆಚ್ಚಾಗಬೇಕು ಎಂಬ ಹಲವು ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು.

ಈ ಸಂದರ್ಭ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿಯ ಅಧ್ಯಕ್ಷ ಮಂಡೇಪಂಡ ಪ್ರವೀಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.