ಅಣ್ಣೀರ ಹರೀಶ್ ಮಾದಪ್ಪ
ಶ್ರೀಮಂಗಲ, ಮೇ 6: ಕೊಡಗು ಜಿಲ್ಲೆಯಲ್ಲಿ ಬಾಳೆ ಕೃಷಿ ಮಾಡಿರುವ ರೈತರು ಕಂಗಾಲಾಗಿದ್ದು ಕೊರೊನಾ ಪ್ರಕರಣದಡಿ ಉಂಟಾಗಿರುವ ಲಾಕ್‍ಡೌನ್ ಹೊಡೆತಕ್ಕೆ ತತ್ತರಿಸಿದ್ದಾರೆ. ಬೆಳೆದಿರುವ ಬಾಳೆಯನ್ನು ಮಾರಾಟ ಮಾಡಲಾಗದೆ ಗೊನೆಯಲ್ಲಿಯೆ ಹಣ್ಣಾಗುತ್ತಿದ್ದು ರೈತ ಸಮುದಾಯ ಅಸಹಾಯಕತೆ ಎದುರಿಸುತ್ತಿದೆ.
ಲಾಕ್‍ಡೌನ್ ನಿಂದ ಕೊಡಗು ಜಿಲ್ಲೆಯ ಮೂಲಕ ಕೇರಳಕ್ಕೆ ತೆರಳುವ ಕುಟ್ಟ, ಮಾಕುಟ್ಟ, ಕರಿಕೆ ಮಾರ್ಗವನ್ನು ಮುಚ್ಚಲ್ಪಟ್ಟಿದ್ದು, ನೇಂದ್ರ ಬಾಳೆಗೆ ಕೇರಳವೆ ಮಾರುಕಟ್ಟೆಯಾಗಿದೆ. ಕೇರಳದ ಮಾರುಕಟ್ಟೆಯನ್ನು ಜಿಲ್ಲೆಯ ಬೆಳೆಗಾರರು ಅವಲಂಭಿಸಿದ್ದಾರೆ
ಕಳೆದ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ದಾಖಲೆಯ ಮಾರುಕಟ್ಟೆ ಬಂದಿತ್ತು. ನೇಂದ್ರ ಬಾಳೆ ಕಾಯಿಗೆ ಕೆ.ಜಿ.ಗೆ ರೂ. 50 ರಿಂದ 60 ಧಾರಣೆ ಇತ್ತು.
ಉತ್ತಮ ಮಾರುಕಟ್ಟೆ ನಿರೀಕ್ಷಿಸಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಾಳೆ ಕೃಷಿಯತ್ತ ಆಸಕ್ತಿ ವಹಿಸಿದರು. ಈ ಹಿನೆÀ್ನಲೆಯಲ್ಲಿ ಕೇರಳದಲ್ಲಿ ಕೃಷಿ ಭೂಮಿ ಕಡಿಮೆ ಇರುವುದರಿಂದ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಬೆಳೆಯುವ ತರಕಾರಿ, ಹಣ್ಣು ಹಂಪಲುಗಳಿಗೆ ಕೇರಳ ರಾಜ್ಯ ಅವಲಂಬಿಸಿದೆ. ಕೇರಳದ ಬೇಡಿಕೆ ಮೇರೆಗೆ ಜಿಲ್ಲೆಯಲ್ಲಿ ನೇಂದ್ರ ಬಾಳೆ ಕೃಷಿ ಮಾಡಲಾಗುತ್ತಿದೆ.
ಆದರೆ ಅನಿರೀಕ್ಷಿತವಾಗಿ ಎದುರಾದ ಕೊರೊನಾ ಲಾಕ್‍ಡೌನ್ ನಿಂದ ಬೆಳೆಗಾರರ ನಿರೀಕ್ಷೆಗೆ ತೀವ್ರ ಹೊಡೆತ ಬಿದ್ದಿದೆ. ಇದರಿಂದ ಕೊಡಗು ಜಿಲ್ಲೆಯಲ್ಲಿ ನೇಂದ್ರ ಬಾಳೆ ಬೆಳೆದಿರುವ ನೂರಾರು ರೈತರು ಕಟಾವಿಗೆ ಬಂದ ತಮ್ಮ ಬೆಳೆಯನ್ನು ಮಾರಾಟ ಮಾಡಲಾಗದೆ, ಬೆಳೆದಿರುವ ಬೆಳೆಯನ್ನು ಕಾರ್ಮಿಕರ ಸಮಸ್ಯೆಯಿಂದ ನಿರ್ವಹಿಸಲಾಗದೆ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಇದರಿಂದ ಗೊನೆಯಲ್ಲಿಯೇ ಗೊನೆಗಳು ಹಣ್ಣಾಗುತ್ತಿದ್ದು ಪಕ್ಷಿ ಪ್ರಾಣಿಗಳು ತಿಂದು ಹಾಕುತ್ತಿವೆ.
ಜಿಲ್ಲೆಯಿಂದ ಮಾಕುಟ್ಟ, ಕುಟ್ಟ ಮತ್ತು ಕರಿಕೆ ಗಡಿಯ ಕೇರಳ ಮಾರ್ಗ ಮುಚ್ಚಲ್ಪಟ್ಟಿದ್ದು ಕೇರಳದಿಂದ ಯಾವುದೇ ವಾಹನ ಜಿಲ್ಲೆಗೆ ಬಂದು ಬಾಳೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಬಾಳೆಯನ್ನು ಕೇರಳಕ್ಕೆ ಸಾಗಿಸಲು ಮೈಸೂರಿನ ಹೆಚ್.ಡಿ. ಕೋಟೆ ಮೂಲಕ ಕೇರಳಕ್ಕೆ ಸಾಗಿಸುತ್ತಿರುವುದು ಬಹು ದೂರದ ಮಾರ್ಗವಾಗಿದ್ದು ಬಳಸು ದಾರಿಯ ಮೂಲಕ ವಾಹನ ಸಾಗಿಸಿ ಇಂದಿನ ಮಾರುಕಟ್ಟೆ ದರದಲ್ಲಿ ನಷ್ಟವಾಗುತ್ತಿದೆ ಎಂದು ಬೆಳೆಗಾರರು ನೋವು ತೋಡಿಕೊಂಡಿದ್ದಾರೆ. ಇದಲ್ಲದೆ ಕೇರಳದ ಕೆಲವು ಬೆಳೆಗಾರರು ಕೊಡಗಿನಲ್ಲಿ ಬಾಳೆ ಕೃಷಿ ಮಾಡಿದ್ದು, ಲಾಕ್‍ಡೌನ್‍ನಿಂದ ಸಿಲುಕಿಕೊಂಡಿರುವುದರಿಂದ ಬಾಳೆಗೊನೆ ಕೊಳೆತು ಹಾಳಾಗುತ್ತಿದೆ.
ನೇಂದ್ರ ಬಾಳೆಗೆ ಕೇರಳ ರಾಜ್ಯ ಮುಖ್ಯ ಮಾರುಕಟ್ಟೆಯಾಗಿದ್ದು ಗೇಟ್ ಮುಚ್ಚಿರುವುದರಿಂದ ಬಾಳೆ ಖರೀದಿಸಲು ಯಾರು ಬರುತ್ತಿಲ್ಲ. ಪ್ರತಿ ಎಕರೆಗೆ ರೂ. 2 ಲಕ್ಷ ವೆಚ್ಚವಾಗುತ್ತಿದ್ದು, ಜಿಲ್ಲೆಯಲ್ಲಿ ಸುಮಾರು 1 ಸಾವಿರ ಎಕರೆ ನೇಂದ್ರ ಬಾಳೆ ಕೃಷಿ ಇದೆ. ಬಾಳೆ ಖರೀದಿಸಲು ಸರಕಾರ ಅವಕಾಶ ಮಾಡಿಕೊಡದಿದ್ದರೆ ಸಾವಿರಾರು ರೈತರು ದೊಡ್ಡ ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಸರಕಾರ ಜಿಲ್ಲೆಯಲ್ಲಿ ಬೆಳೆದ ರೈತರ ಬಾಳೆ ಬೆಳೆಯನ್ನು ಖರೀದಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಡಳಿತವೆ ಬೆಂಬಲ ಬೆಲೆಯಲ್ಲಿ ಬೆಳೆಗಾರರಿಗೆ ನಷ್ಟವಾಗದಂತೆ ಖರೀದಿಸಬೇಕು ಎಂದು ಬೆಳೆಗಾರರಾದ ಧರ್ಮಜ ಉತ್ತಪ್ಪ, ಚಟ್ಟಂಡ ನಟೇಶ್ ಒತ್ತಾಯಿಸಿದ್ದಾರೆ.