ಮಡಿಕೇರಿ, ಮೇ 6: ಕೊಡಗು ಜಿಲ್ಲಾ ರೆಡ್ ಕ್ರಾಸ್ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾರ್ಗದರ್ಶನದಲ್ಲಿ ಕಳೆದ 1 ತಿಂಗಳಿನಿಂದ ರೆಡ್ ಕ್ರಾಸ್ ಘಟಕವು ಕೊರೊನಾ ಸಂಕಷ್ಟ ಸಂದರ್ಭ ಅನೇಕರಿಗೆ ನೆರವು ನೀಡಿದೆ.
ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ಬಡವರ್ಗದವರಿಗೆ ಕೊಡಗು ರೆಡ್ ಕ್ರಾಸ್ ವತಿಯಿಂದ ನೆರವು ನೀಡಲಾಗಿದೆ.
ಕೋವಿಡ್ 19 ವೈರಸ್ ಹರಡುವಿಕೆ ಸಂಬಂಧಿತ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಜಿಲ್ಲೆಯ ಹಲವು ಕಡೆ ಕರಪತ್ರಗಳನ್ನು ಹಂಚಲಾಗಿದ್ದು, ರೆಡ್ಕ್ರಾಸ್ ವತಿಯಿಂದ ಕೋವಿಡ್ 19 ವೈರಾಣು ಕುರಿತಾಗಿ ಜಿಲ್ಲೆಯ ಮೂರೂ ತಾಲೂಕುಗಳಲ್ಲಿ ಜಾಗೃತಿ ಸಂದೇಶದ ವಾಹನದ ಮೂಲಕ ಅರಿವು ಮೂಡಿಸಲಾಯಿತು. ಮಡಿಕೇರಿ, ಕುಶಾಲನಗರದ ನ್ಯಾಯಾಲಯಗಳ ನ್ಯಾಯಾಧೀಶರೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರೆಡ್ಕ್ರಾಸ್ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಕೊಡಗು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕಾರ್ಮಿಕರು, ಬಡವರ್ಗದವರಿಗೆ 15 ಸಾವಿರ ಮಾಸ್ಕ್ 10 ಸಾವಿರ ಸೋಪ್, 3000 ಸ್ಯಾನಿಟೈಸರ್ ಗಳನ್ನು ವಿತರಿಸಲಾಗಿದೆ. ಅಂತೆಯೇ ಹೊರಜಿಲ್ಲೆಗೆ ಕೊಡಗಿನಿಂದ ತೆರಳಿದ ವಲಸೆ ಕಾರ್ಮಿಕರಿಗೂ ಸುರಕ್ಷತ ಪರಿಕರಗಳನ್ನು ರೆಡ್ಕ್ರಾಸ್ನಿಂದ ವಿತರಿಸಲಾಗಿದೆ ಎಂದು ರೆಡ್ಕ್ರಾಸ್ ಸಭಾಧ್ಯಕ್ಷ ಬಿ.ಕೆ. ರವೀಂದ್ರರೈ ಮಾಹಿತಿ ನೀಡಿದ್ದಾರೆ. ರೆಡ್ಕ್ರಾಸ್ನ ತಾಲೂಕು ಘಟಕವು ಕುಶಾಲನಗರದಲ್ಲಿ 20 ದಿನಗಳ ಕಾಲ ಪಡಿತರಕಿಟ್ ವಿತರಿಸಿದ್ದು ಗ್ರಾಮೀಣ ಪ್ರದೇಶದ ಜನರ ಸಂಕಷ್ಟಕ್ಕೂ ಕುಶಾಲನಗರ ರೆಡ್ಕ್ರಾಸ್ ಘಟಕದ ಅಧ್ಯಕ್ಷ ಎಸ್.ಕೆ.ಸತೀಶ್ ನೇತೃತ್ವದ ತಂಡ ಶ್ರಮಿಸಿದೆ ಎಂದು ರವೀಂದ್ರ ರೈ ತಿಳಿಸಿದರು.
ಮುಂದಿನ ದಿನಗಳಲ್ಲಿಯೂ ಕೊಡಗಿನಲ್ಲಿ ನೆರವು ಅಗತ್ಯವಿರುವ ಕಾರ್ಮಿಕರಿಗೆ ರೆಡ್ಕ್ರಾಸ್ ಸಹಾಯಕ್ಕೆ ಮುಂದಾಗಲಿದ್ದು, ರಕ್ತದ ತೀವ್ರ ಕೊರತೆ ಗಮನಿಸಿ ಲಾಕ್ಡೌನ್ ತೆರವುಗೊಂಡ ಬಳಿಕ ರೆಡ್ಕ್ರಾಸ್ ವತಿಯಿಂದ ರಕ್ತದಾನ ಶಿಬಿರವನ್ನು ಎಲ್ಲಾ ಸುರಕ್ಷತಾ ವಿಧಾನ ಕಾಯ್ದುಕೊಂಡು ಆಯೋಜಿಸಲಾಗುತ್ತದೆ ಎಂದು ರೆಡ್ಕ್ರಾಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಆರ್. ಮುರಳಿಧರ ತಿಳಿಸಿದ್ದಾರೆ.