ವೀರಾಜಪೇಟೆ, ಮೇ 4: ಸರಕಾರದ ಲಾಕ್‍ಡೌನ್ ನಿಮಿತ್ತ ಮುಂದೂಡಲ್ಪಟ್ಟಿದ್ದ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ತಾ. 9ರವರೆಗೆ ವೀರಾಜಪೇಟೆ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗಾಗಿ ವಿಷಯವಾರು ಆಧಾರದಲ್ಲಿ ವಿಷಯ ತಜ್ಞ ಶಿಕ್ಷಕರೊಂದಿಗೆ ನೇರ ಫೋನ್-ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆಯೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದರಂತೆ ತಾ. 5 ರಂದು (ಇಂದು) ವಿಜ್ಞಾನ, 6 ರಂದು ಸಮಾಜ ವಿಜ್ಞಾನ, 7ರಂದು ಇಂಗ್ಲೀಷ್, 8 ರಂದು ಕನ್ನಡ ಹಾಗೂ 9ನೇ ತಾರೀಕಿನಂದು ಹಿಂದಿ ವಿಷಯಗಳ ಶಿಕ್ಷಕರುಗಳು ವಿದ್ಯಾರ್ಥಿಗಳೊಂದಿಗೆ ಸಂವಾದಿಸಲಿದ್ದಾರೆ. ಪೂರ್ವಾಹ್ನ 11 ರಿಂದ 12.30ರ ವರೆಗೆ ವಿಷಯವಾರು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಚರ್ಚಿಸಬಹುದಾಗಿದೆ. ಬಿಳುಗುಂದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್. ಬಿಂದು ಮೊ. 9611720320 ಹಾಗೂ ಇ.ಸಿ.ಓ ಅಯ್ಯಪ್ಪ ಮೊ. 9480309481 ಅವರನ್ನು ಸಂಪರ್ಕಿಸಬಹುದಾಗಿಯೂ ತಿಳಿಸಲಾಗಿದೆ.