ಏನೆಲ್ಲಾ ಇದೆ, ಎನ್ನುತ್ತಿದ್ದವರ ಬಳಿ ಏನೂ ಇಲ್ಲವೀಗ...! ಏಪ್ರಿಲ್, ಮೇ ತಿಂಗಳು ಬಂದೊಡನೇ ಕೊಡಗು ಜಿಲ್ಲೆಯ ಹೊಟೇಲ್, ರೆಸ್ಟೋರೆಂಟ್ಗಳಲ್ಲಿ ಕಿಕ್ಕಿರಿದಿರುತ್ತಿದ್ದ ಪ್ರವಾಸಿಗರು, ರೂಮ್ಗಾಗಿ ದುಂಬಾಲು ಬೀಳುತ್ತಿದ್ದ ಪ್ರವಾಸಿಗರು, ಕೊಡಗಿನ ನಗರಗಳ ಕಿರಿದಾದ ರಸ್ತೆಗಳಲ್ಲಿ ಟ್ರಾಫಿಕ್ ಜಾಂ... ಎಲ್ಲೆಲ್ಲೂ ಜನವೋ ಜನ.. ಜನರ ಊಟ, ತಿಂಡಿ ಬೇಡಿಕೆ ಪೂರೈಸಲು ರೆಸ್ಟೋರೆಂಟ್ ಸಿಬ್ಬಂದಿಗಳ ಹರಸಾಹಸ. ಪ್ರತೀ ವರ್ಷ ಕಂಡು ಬರುತ್ತಿದ್ದ ಈ ಚಿತ್ರಣ ಇದೀಗ ಕೊಡಗಿನಲ್ಲಿ ಮರೆಯಾಗಿದೆ. ಪ್ರವಾಸಿಗರಿಗೆ ಊಟ, ತಿಂಡಿ ನೀಡುತ್ತಿದ್ದ ಸಿಬ್ಬಂದಿಗಳ ಕೈಗಳೇ ತಮಗೆ ಊಟ ನೀಡಿ ಎಂದು ಬೇಡುತ್ತಿವೆ. ಸಾವಿರಾರು ಜನರಿಗೆ ಉದ್ಯೋಗ, ಆಶ್ರಯ ನೀಡಿದ್ದ ಕೊಡಗಿನ ಹೊಟೇಲ್ ಉದ್ಯಮ ಅಕ್ಷರಶ ತತ್ತರಿಸಿದೆ. ಮುಂದೇನು ಎಂಬ ಚಿಂತೆಯಲ್ಲಿ ಹೊಟೇಲ್ ಉದ್ಯಮಿಗಳಿದ್ದಾರೆ. ಪ್ರಕೃತ್ತಿ ವಿಕೋಪದಿಂದ ಎರಡು ವರ್ಷಗಳ ಕಾಲ ಸತತವಾಗಿ ತತ್ತರಿಸಿದ್ದ ಉದ್ಯಮಿಗಳು ಲಾಕ್ಡೌನ್ ಹೊಡೆತದಿಂದಾಗಿ ಸಂಪೂರ್ಣವಾಗಿ ನಷ್ಟಕ್ಕೊಳಗಾಗಿದ್ದಾರೆ. ಮೇ 4ರ ನಂತರವಾದರೂ ಉದ್ಯಮ ಪ್ರಾರಂಭಿಸ ಬಹುದು ಎಂದು ಲೆಕ್ಕಹಾಕುತ್ತಿದ್ದ ಹೊಟೇಲ್ ಉದ್ಯಮಿಗಳು ಇದೀಗ ಮೇ 17 ರವರೆಗೆ ಲಾಕ್ಡೌನ್ ಮಾಡಬೇಕಾದ ಅನಿವಾರ್ಯತೆಯಲ್ಲಿ ಆರ್ಥಿಕವಾಗಿ ಮೇಲೇಳಲೇ ಆಗದ ಸ್ಥಿತಿಯತ್ತ ಸಾಗುತ್ತಿದ್ದಾರೆ. ಲಾಕ್ಡೌನ್ ಮುಗಿದು ಹೊಟೇಲ್ ಉದ್ಯಮ ಪ್ರಾರಂಭವಾಗುವ ದಿನಗಳಲ್ಲಿ ಕೊಡಗಿನ ಅನೇಕ ಹೊಟೇಲ್, ರೆಸ್ಟೋರೆಂಟ್, ಲಾಡ್ಜ್ಗಳು ವಹಿವಾಟು ಸ್ಥಗಿತಗೊಳಿಸಿ ಬಾಗಿಲು ಮುಚ್ಚಿರುತ್ತದೆ. ಸಾವಿರಾರು ಕಾರ್ಮಿಕರಿಗೆ ಉದ್ಯೋಗದೊಂದಿಗೆ ಊಟ, ತಿಂಡಿ, ವಸತಿ ಕಲ್ಪಿಸಿ ದಾರಾಳತನ ತೋರಿದ್ದ ಹೊಟೇಲ್ ಉದ್ಯಮಿ ಗಳೇ ಈಗ ಅತಂತ್ರರಾಗಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್ಗಳು ಏನಿಲ್ಲವೆಂದರೂ 280 ಸಂಖ್ಯೆಯಲ್ಲಿದೆ. ಅಂದಾಜು 30 ಸಾವಿರ ಸಿಬ್ಬಂದಿ ಗಳನ್ನು ಹೊಟೇಲ್ ಉದ್ಯಮ ಸಲಹುತ್ತಿದೆ. ಪರೋಕ್ಷವಾಗಿ ಈ ಸಿಬ್ಬಂದಿಗಳ ಕುಟುಂಬವರ್ಗ ಸೇರಿದಂತೆ 1.25 ಲಕ್ಷ ಜನ ಹೊಟೇಲ್ ಉದ್ಯಮವನ್ನೇ ಜೀವನಕ್ಕಾಗಿ ಅವಲಂಭಿಸಿದ್ದಾರೆ. ಪ್ರವಾಸಿತಾಣವಾದ ಕೊಡಗು ಜಿಲ್ಲೆಯಲ್ಲಿ ಪ್ರತಿ ನಿತ್ಯ ಹೊಟೇಲ್ ಉದ್ಯಮ ಕನಿಷ್ಟ 2.50 ಕೋಟಿ ರೂ. ವಹಿವಾಟು ನಡೆಸುತ್ತಿತ್ತು. ಇದೀಗ ಹೊಟೇಲ್ ಉದ್ಯಮ ಮುಚ್ಚಿ 50 ದಿನಗಳೇ ಆಗುತ್ತಿದ್ದು ಕನಿಷ್ಟ 150 ಕೋಟಿ ರೂ. ಕೊಡಗು ಜಿಲ್ಲೆಯೊಂದರಲ್ಲಿಯೇ ನಷ್ಟ ಸಂಭವಿಸಿದೆ. ಹೊಟೇಲ್ ಉದ್ಯಮದೊಂದಿಗೆ ಬಾಡಿಗೆ ಆಟೋ, ಕಾರ್, ವ್ಯಾನ್, ಬಸ್, ಏಜನ್ಸಿ, ಬೀಡಾ, ಸಿಗರೇಟ್, ತರಕಾರಿ, ಲಾಂಡ್ರಿ ಹಾಗೂ ಇತರ ಮಾರಾಟ ಗಾರರೂ ಸೇರಿದಂತೆ ಹಲವು ಇತರ ಉದ್ಯಮಗಳೂ ಅವಲಂಭಿತವಾಗಿದೆ. ಇವರೆಲ್ಲರೂ ಇದೀಗ ಆತಂಕಕ್ಕೀಡಾಗಿದ್ದಾರೆ.
ಪರಿಸ್ಥಿತಿ ಹೇಗಾಗಿದೆ ಎಂದರೆ, ಬಹುತೇಕ ಹೊಟೇಲ್ ಸಿಬ್ಬಂದಿಗಳು ಕೊಡಗಿನಿಂದ ತಮ್ಮೂರಿಗೆ ತೆರಳಿಬಿಟ್ಟಿದ್ದಾರೆ. ಅನೇಕ ಸಿಬ್ಬಂದಿಗಳು ಹೊಟೇಲ್ ಮಾಲೀಕರ ಬಳಿ ಸಾವಿರಾರು ರೂಪಾಯಿ ಸಾಲ ಪಡೆದಿದ್ದಾರೆ. ಈಗ ಸಾಲ ಮರಳಿ ಕೊಡುವುದೂ ಕಷ್ಟಕರ. ಹೀಗಾಗಿ ಮತ್ತೆ ಕೆಲಸಕ್ಕೆ ತೆರಳಿದರೆ ಸಾಲ ಕೊಡಬೇಕಾಗುತ್ತೆ ಎಂಬ ಹಿನ್ನಲೆಯಲ್ಲಿ ಮರಳಿ ಕೊಡಗಿನ ಹೊಟೇಲ್ ಉದ್ಯಮಕ್ಕೆ ಇಂಥ ಕಾರ್ಮಿಕರು ಬರುವುದು ಕಷ್ಟ. ಅನೇಕ ಹೊಟೇಲ್ ಉದ್ಯಮಿಗಳು ತಮಗೆ ಕನಿಷ್ಟ ಸಂಖ್ಯೆಯಲ್ಲಿ ಸಿಬ್ಬಂದಿಗಳು ಸಾಕು ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ. ಹೀಗಾಗಿ ಲಾಕ್ಡೌನ್ ಮುಗಿದ ಬಳಿಕ ಕೊಡಗಿನ ಹೊಟೇಲ್ ಉದ್ಯಮವು ಕೆಲವೇ ಕೆಲವು ಸೀಮಿತ ಸಂಖ್ಯೆಯ ಸಿಬ್ಬಂದಿಗಳಿಂದ ಕೆಲವಾರು ತಿಂಗಳು ನಿರ್ವಹಿಸಲ್ಪಡಲಿದೆ.
ಕೊಡಗಿನ 60ರಷ್ಟು ಬಾರ್ಅಂಡ್ರೆಸ್ಟೋರೆಂಟ್ಗಳಿಗೆ ನಷ್ಟದ ಬಹಳ ದೊಡ್ಡ ಕಿಕ್ ಹಲವಾರು ತಿಂಗಳ ಕಾಲ ಆಘಾತಕಾರಿಯಾಗಲಿದೆ. ಪರಿಸ್ಥಿತಿಯ ಕುರಿತಾಗಿ ಕೊಡಗು ಜಿಲ್ಲಾ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್ ಅಸೋಸಿಯೇಶನ್ಸ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್ ಕೊಡಗಿನ ಹೊಟೇಲ್ ಉದ್ಯಮದ ಸಂಕಷ್ಟದ ಬಗ್ಗೆ ಹೇಳಿದಿಷ್ಟು.
v
v
v
v
v
v
v
ಲಾಕ್ಡೌನ್ ತೆರವಾದರೂ ಹೊಟೇಲ್ ಉದ್ಯಮ ಪ್ರಾರಂಭವಾದರೂ ದಿಢೀರನೆ ಹೊಟೇಲ್, ರೆಸ್ಟೋರೆಂಟ್ಗಳಿಗೆ ಜನ ಬರವುದು ಸಂಶಯವೇ. ಹೀಗಾಗಿ ವಹಿವಾಟು ಪ್ರಾರಂಭವಾದ 1 ತಿಂಗಳವರೆಗೂ ನಷ್ಟದಲ್ಲಿಯೇ ವಹಿವಾಟು ನಡೆಸಬೇಕಾದ ಅನಿವಾರ್ಯತೆಯಿದೆ ಎಂದು ಮಡಿಕೇರಿಯ ಹೊಟೇಲ್ನ ಉದ್ಯಮಿ ದಿನೇಶ್ ಕಾರ್ಯಪ್ಪ ಹೇಳಿದರು. ಇನ್ನೇನು ಮಳೆಗಾಲ ಕೂಡ ಪ್ರಾರಂಭವಾಗಲಿರುವುದರಿಂದಾಗಿ ಅಕ್ಟೋಬರ್ ವರೆಗೆ ವಹಿವಾಟು ಪ್ರಾರಂಭಿಸಿದರೂ ನಷ್ಟದಲ್ಲಿಯೇ ಸಾಗಬೇಕಾದ ಅನಿವಾರ್ಯತೆಯಿದೆ. ಮುಂದಿನ ಏಪ್ರಿಲ್-ಮೇ ಸೀಜನ್ಗೇ ನಾವು ತಯಾರಾಗಬೇಕಾಗಿದೆ. 1 ವರ್ಷದ ನಷ್ಟವನ್ನು ಯಾವ ಹೊಟೇಲ್ ಉದ್ಯಮಿ ತಡೆಯಬಲ್ಲನೋ ಅವನು ಮಾತ್ರ ಈ ವಹಿವಾಟಿನಲ್ಲಿ ಮುಂದುವರೆಯಬಲ್ಲ ಎಂದರು ದಿನೇಶ್.
ಕಳೆದ 32 ವರ್ಷಗಳ ಹೊಟೇಲ್ ವಹಿವಾಟಿನಲ್ಲಿ ಇಂಥ ಸ್ಥಿತಿ ನಿರೀಕ್ಷೆಯೇ ಮಾಡಲಿಲ್ಲ. ಮೊದಲೆಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರವಾದ ಮಡಿಕೇರಿಯ ಹೊಟೇಲ್ಗಳಿಗೆ ನೂರಾರು ಜನ ಬರುತ್ತಿದ್ದರು. ಸುನಾಮಿ ವಿಕೋಪದ ನಂತರ ಮಡಿಕೇರಿ ಹೊಟೇಲ್ಗಳೂ ಕೂಡ ಪ್ರವಾಸಿಗರನ್ನೇ ನಂಬಿಕೊಳ್ಳು ವಂತಾಯಿತು ಎಂದು ಹೇಳಿದ ಹೊಟೇಲ್ ಉದ್ಯಮಿ ನಾರಾಯಣರಾವ್, ಲಾಕ್ಡೌನ್ನಿಂದಾಗಿ ಆಗಿರುವ ನಷ್ಟ ಊಹಿಸಲೂ ಅಸಾಧ್ಯ, ಹೊರಜಿಲ್ಲೆಯ ಕಾರ್ಮಿಕರನ್ನೇ ಬಹುತೇಕ ನಂಬಿಕೊಂಡಿರುವ ಉದ್ಯಮವಿದು. ಮುಂದೇನು ಕಾದಿದೆಯೋ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಕೊಡಗಿನ ಹೊಟೇಲ್ ಮತ್ತು ಪ್ರವಾಸೋದ್ಯಮದ ಪಾಲಿಗೆ 2020 ಮುಗಿದ ವರ್ಷ. ಈ ವರ್ಷ ಏನನ್ನೂ ನಿರೀಕ್ಷಿಸಲಾಗದು. ಎಷ್ಟು ಕಡಿಮೆ ನಷ್ಟವಾಗಿದೆ ಎಂದು ಲೆಕ್ಕಾಚಾರ ಹಾಕುವುದೊಂದೇ ನಮಗೆ ಉಳಿದ ಮಾರ್ಗವಾಗಿದೆ. ಚೇತರಿಸಿಕೊಳ್ಳಲೂ ಹೊಟೇಲ್ ಉದ್ಯಮಿಗಳು ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ. ಇಡ್ಲಿ ವಡೆ, ಬಿಸಿಬಿಸಿ ದೋಸೆ, ಪೂರಿಪಲ್ಯ, ಉಪ್ಪಿಟ್ಟು, ಕೇಸರಿಬಾತ್, ಅವಲಕ್ಕಿ, ಬೋಂಡ , ಬಜ್ಜಿ, ಚಿಕನ್ ಬಿರಿಯಾನಿ, ಮಟನ್, ಫಿಶ್, ಚೈನೀಸ್ ಐಟಮ್, ಐಸ್ ಕ್ರೀಮ್ ಎಂಬೆಲ್ಲಾ ಪದಗಳು ಕೇಳದೆ 50 ದಿನಗಳೇ ಕಳೆದಿವೆ. ಈ ಪದಗಳನ್ನು ಕೇಳಲು ಮತ್ತೆಷ್ಟು ದಿನಗಳು ಬೇಕೋ ? ಅನ್ನ ಕೊಟ್ಟ ಕೈಗಳಿಗೆ ಅನ್ನ ಸದಾ ಸಿಗುತ್ತಿರಲಿ. ಆಹಾರ ನೀಡುವ ಆತಿಥ್ಯದ ವಹಿವಾಟಿನಲ್ಲಿ ತೊಡಗಿಸಿಕೊಂಡವರಿಗೆ ಭವಿಷ್ಯ ದಲ್ಲಿ ಒಳಿತಾಗಲಿ.