ಸೋಮವಾರಪೇಟೆ, ಮೇ 4: ಜಾಗಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದು ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ.

ಪಟ್ಟಣದ ಬಾಣಾವರ ರಸ್ತೆ ನಿವಾಸಿ ಎಸ್.ಆರ್. ವಸಂತ್ ಅವರಿಗೆ ಸೇರಿದ ಆಸ್ತಿಯಲ್ಲಿ ಗಂಗಾಧರ್ ಎಂಬವರು ಅಕ್ರಮವಾಗಿ ಮನೆ ಕಟ್ಟಿಕೊಂಡಿರುವ ಬಗ್ಗೆ ಪ್ರಶ್ನಿಸಿದ ಸಂದರ್ಭ, ಜಾಗದ ಮಾಲೀಕ ವಸಂತ್ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಸ.ನಂ. 64/14ರಲ್ಲಿ 10 ಸೆಂಟ್ ಜಾಗವನ್ನು 1950 ರಂದು ವಸಂತ್ ಅವರ ಅಜ್ಜ ಬೀರಪ್ಪ ಎಂಬವರಿಗೆ ಸರ್ಕಾರ ಮಂಜೂರು ಮಾಡಿದ್ದು, ಈ ಜಾಗದಲ್ಲಿ ಗಂಗಾಧರ್ ಅವರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಂದರ್ಭ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಒಡ್ಡಿರುವದಾಗಿ ವಸಂತ್ ಅವರು ದೂರು ನೀಡಿದ್ದು, ಈ ಬಗ್ಗೆ ಠಾಣಾಧಿಕಾರಿ ಶಿವಶಂಕರ್ ಅವರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಡಿವೈಎಸ್‍ಪಿ ಶೈಲೇಂದ್ರ ಅವರು ತನಿಖೆ ಕೈಗೊಂಡಿದ್ದಾರೆ.