ಶ್ರೀಮಂಗಲ, ಮೇ 4: ದ. ಕೊಡಗಿನ ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಂಟರಗಾಳಿ ಸಹಿತ ಸುರಿದ ಭಾರೀ ಮಳೆಗೆ ಬಾಳೆ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಈಗಾಗಲೇ ಕೋವಿಡ್ 19 ಲಾಕ್ಡೌನ್ನಿಂದ ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ತೀರ್ವ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಯಲ್ಲಿ ಬಾಳೆ ಬೆಳೆದ ಬೆಳೆಗಾರರಿಗೆ ಸುಂಟರಗಾಳಿ ಸಹಿತ ಮಳೆ ಗಾಯದ ಮೇಲೆ ಬರೆ ಎಳೆದಿದೆ.
ಗಾಳಿಮಳೆಗೆ ಹಲವು ಬೆಳೆಗಾರರು ಬೆಳೆದ ಸಾವಿರಾರು ಬಾಳೆ ನೆಲಕಚ್ಚಿವೆ. ಬಾಳೆಗೊನೆ ಸಹಿತ ಮುರಿದು ಬಿದ್ದಿದ್ದು ಅರ್ಧ ಬೆಳೆದಿರುವ ಮುರಿದು ಬಿದ್ದ ಬಾಳೆಗೊನೆಯನ್ನು ಮಾರಾಟ ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ. ಇನ್ನೊಂದು ಕಡೆ ಕೊಡಗಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಬಾಳೆಗೆ ಬೇಡಿಕೆ ವ್ಯಾಪಕವಾಗಿ ಕುಸಿದಿದೆ. ಇದರಿಂದ ಬಾಳೆ ಬೆಳೆಯಲು ಖರ್ಚುಮಾಡಿದ ಅಸಲು ಸಹ ದೊರೆಯದೆ ದೊಡ್ಡ ಪ್ರಮಾಣದ ನಷ್ಟವನ್ನು ಬೆಳೆಗಾರರು ಅನುಭವಿಸುವಂತಾಗಿದೆ ಎಂದು ನಷ್ಟಗೊಂಡಿರುವ ಬೆಳೆಗಾರರು ನೋವು ತೋಡಿಕೊಂಡಿದ್ದಾರೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಬೆಳೆ ನಷ್ಟಗೊಂಡಿರುವ ಬೆಳೆಗಾರರಿಗೆ ನೆರವು ನೀಡುವ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ ನೆರವು ನೀಡಲು ಸಂಭಂದಿಸಿದ ಇಲಾಖೆ ಕ್ರಮಕೈಗೊಳ್ಳುವಂತೆ ಬೆಳೆಗಾರರು ಮನವಿ ಮಾಡಿದ್ದಾರೆ.