ಸೋಮವಾರಪೇಟೆ, ಮೇ 4: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಮೀಸಲು ಅರಣ್ಯದಲ್ಲಿ ಆನೆಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ತೆಗೆಸಲಾಗುತ್ತಿರುವ ಕೆರೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕೂಡಲೇ ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೀಸಲು ಅರಣ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಆನೆಗಳು ಎದುರಿನ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿರುವ ಕೆರೆಯಲ್ಲಿ ನೀರು ಕುಡಿಯಲು ಪ್ರತಿ ದಿನ ಸಂಜೆ ಹೋಗಿ ಮಾರನೆ ದಿನ ಬೆಳಿಗ್ಗೆ ಹಿಂದಿರುಗುತ್ತಿದ್ದು, ಈ ಸ್ಥಳದಲ್ಲಿ ಟಾಟಾ ಕಾಫಿ ಸಂಸ್ಥೆಯವರು ಸೋಲಾರ್ ಬೇಲಿ ಅಳವಡಿಸಿದ್ದರಿಂದಾಗಿ ಹೆಚ್ಚಿನ ಸಮಸ್ಯೆಯಾಗಿದೆ. ಇದರಿಂದಾಗಿ ಕಾಡಿನಲ್ಲಿಯೇ ನೀರಿನ ವ್ಯವಸ್ಥೆ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದರು.
ಕಾಜೂರಿನಲ್ಲಿರುವ ಮೀಸಲು ಅರಣ್ಯದೊಳಗೆ ಕಳೆದ ಐದು ದಿನಗಳಿಂದ ಕೆರೆ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಕೆರೆ ತೋಡುವದರಿಂದ ಯಾವದೇ ಪ್ರಯೋಜನವಿಲ್ಲ. ಆನೆಗಳು ಒಮ್ಮೆ ಮಾತ್ರ ಕೆರೆಯ ನೀರನ್ನು ಕುಡಿದು, ನಂತರ ಹೊಸ ನೀರನ್ನು ಹುಡುಕಿಕೊಂಡು ಹೋಗುತ್ತವೆ. ಕೆರೆಯ ನೀರು ಕೇವಲ ಸ್ನಾನಕ್ಕಾಗಿ ಮಾತ್ರ ಬಳಕೆಯಾಗುವದರಿಂದ ನೂತನ ಕೆರೆಯಿಂದ ಪ್ರಯೋಜನವಿಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯಿಸಿ, ಇಲಾಖೆಯ ಅಧಿಕಾರಿಗಳ ಗಮನ ಸೆಳೆದರು.
ಇದರೊಂದಿಗೆ ಈಗಾಗಲೇ ಕಾಡಿನಲ್ಲಿ ಎರಡು ಸಾಧಾರಣ ನೀರು ಇರುವ ಕೆರೆಗಳಿದ್ದು, ಅವುಗಳನ್ನು ಮೊದಲು ಸರಿಪಡಿಸಿ; ನಂತರ ನೂತನ ಕೆರೆ ನಿರ್ಮಿಸಲು ಇಲಾಖೆ ಮುಂದಾಗಬೇಕೆಂದು ಗ್ರಾಮದ ಮಚ್ಚಂಡ ಅಶೋಕ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ಆನೆ ಕಾರಿಡಾರ್ ಇದ್ದು, ಇದಕ್ಕೆ ಸೋಲಾರ್ ಬೇಲಿ ಅಳವಡಿಸಲಾಗಿದೆ. ಎಸ್ಟೇಟ್ನವರ ಒತ್ತಡದಿಂದಾಗಿ ಕೆರೆ ನಿರ್ಮಿಸಲು ಇಲಾಖೆ ಮುಂದಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಒಂದೆರಡು ಏಕರೆ ಕೃಷಿ ಭೂಮಿ ಇರುವ ಬಡ ಕೃಷಿಕರ ಫಸಲು ನಾಶವಾಗುತ್ತಿದೆ. ಕೂಡಲೇ ಹಾಳಾಗಿರುವ ಸೋಲಾರ್ ತಂತಿಯನ್ನು ಸರಿಪಡಿಸುವಂತೆ ಐಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ. ರಾಯ್ ಆಗ್ರಹಿಸಿದರು.
ಈ ಸಂದರ್ಭ ಆರ್ಎಫ್ಒ ಶಮಾ ಮಾತನಾಡಿ, ಕಾಡಿನಲ್ಲಿರುವ ಎರಡು ಕೆರೆಗಳನ್ನು ಪುನರ್ನಿರ್ಮಾಣ ಹಾಗೂ ಕಾಡಾನೆಗಳು ಗ್ರಾಮಕ್ಕೆ ತೆರಳುತ್ತಿರುವಲ್ಲಿ 50 ಮೀಟರ್ ಸೋಲಾರ್ ಬೇಲಿ ನಿರ್ಮಾಣ ಮಾಡಲು ಕ್ರಮವಹಿಸಲಾಗುವದು. ಸದ್ಯದಲ್ಲಿಯೇ ಟಾಟಾ ಕಾಫಿ ಸಂಸ್ಥೆಯ ಅಧಿಕಾರಿಗಳು, ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ನಂಗಾರು ರಾಮಚಂದ್ರ, ಚಿನ್ನಳ್ಳಿ ಹರೀಶ್, ಬಾರನ ಭರತ್, ಎಸ್.ಎನ್. ಯೋಗೇಶ್, ಡಿ.ಪಿ. ಕೃಷ್ಣಪ್ಪ, ಡಿಆರ್ಎಫ್ಒ ಜಗದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.