ಕುಶಾಲನಗರ, ಮೇ 3 : ಕೊರೊನಾ ವಾರಿಯರ್ಸ್ ರಕ್ಷಣೆಗಾಗಿ ಬಳಸುವ ಮುಖಗವಸು ತಯಾರಿಕೆಯಲ್ಲಿ ಸೇವಾ ಭಾರತಿ ಸಂಸ್ಥೆ ತೊಡಗಿಸಿಕೊಂಡಿದೆ. ವೀರಾಜಪೇಟೆಯ ಅನುರಾಧ ಸಂಸ್ಥೆಯ ಸಹಯೋಗದೊಂದಿಗೆ ಸ್ಥಳೀಯ 50 ಕ್ಕೂ ಅಧಿಕ ಸೇವಾ ಭಾರತಿ ಕಾರ್ಯಕರ್ತರು ಕಳೆದ ಎರಡು ದಿನಗಳಿಂದ ಮುಖಗವಸು ತಯಾರಿಕೆಯಲ್ಲಿ ತಲ್ಲೀನರಾಗಿದ್ದಾರೆ.
ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸೇವಾ ಭಾರತಿ ಪ್ರಮುಖ ಕೆ.ಕೆ.ದಿನೇಶ್ ತಿಳಿಸಿದ್ದಾರೆ.
ಒಟ್ಟು 5 ಸಾವಿರ ಮುಖಗವಸುಗಳ ಅವಶ್ಯಕತೆ ಜಿಲ್ಲಾಡಳಿತಕ್ಕಿದ್ದು, ಅದರಲ್ಲಿ ಕುಶಾಲನಗರದಲ್ಲಿ 4 ಸಾವಿರ ತಯಾರಿಸಿ ರವಾನಿಸಲಾಗುವುದು. ಮಾರುಕಟ್ಟೆಯಲ್ಲಿ ಅಂದಾಜು ರೂ. 30 ರಿಂದ 50 ದರ ಇರುವ ಈ ಮಾಸ್ಕ್‍ಗಳನ್ನು ಸೇವಾ ಭಾರತಿ ಮೂಲಕ ಕೇವಲ ರೂ. 8 ರಿಂದ 10 ದರದಲ್ಲಿ ತಯಾರಿಸಲಾಗುತ್ತಿದೆ ಎಂದು ದಿನೇಶ್ ತಿಳಿಸಿದ್ದಾರೆ.
ಉಳಿದಂತೆ ಸಾವಿರ ಫೇಸ್ ಶೀಲ್ಡ್‍ಗಳನ್ನು ಮಡಿಕೇರಿ ಕಾರ್ಯಕರ್ತರು ತಯಾರಿಸಿ ರವಾನಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪುಟ್ಟ ಮಕ್ಕಳೂ ಕೂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಕಂಡುಬಂದಿದೆ.
ಪ್ರಮುಖರಾದ ಲಕ್ಷ್ಮಿನಾರಾಯಣ, ಮಧುಸೂದನ್, ಜನಾರ್ಧನ್ ಮತ್ತಿತರರ ನೇತೃತ್ವದಲ್ಲಿ ಈಗಾಗಲೆ 3 ಸಾವಿರಕ್ಕೂ ಅಧಿಕ ಮಾಸ್ಕ್‍ಗಳು ಸಿದ್ದಗೊಂಡಿವೆ.