ಶನಿವಾರಸಂತೆ, ಮೇ 2: ಸಮೀಪದ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಕಟ್ಟೆಪುರ ಗ್ರಾಮದ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯೋಧ ಲೋಕೇಶ್ (30) ಹಾಗೂ ಸಂಬಂಧಿ ಲತೇಶ್ (27) ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಬೆಸೂರು ಗ್ರಾಮದ ನಂಜಪ್ಪ ಅವರ ಪುತ್ರ ಲೋಕೇಶ್ 2009 ರಿಂದ ಉತ್ತರಾಖಂಡ್‍ನಲ್ಲಿ ಸೈನಿಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಊರಿಗೆ ಬಂದಿದ್ದು ವಾರದ ಹಿಂದೆಯಷ್ಟೇ ಹಾಸನ ಮೂಲದ ಯುವತಿ ಜತೆ ವಿವಾಹ ನಿಶ್ಚಯವಾಗಿತ್ತು.
ಮತ್ತೋರ್ವ ಯುವಕ ಉದ್ಯಮಿ ಲತೇಶ್ ಬೆಸೂರು ಗ್ರಾಮದ ಶಾಂತರಾಜು ಅವರ ಪುತ್ರನಾಗಿದ್ದು, ನೀರಿನಲ್ಲಿ ಮುಳುಗಿದ ಸಂಬಂಧಿ ಲೋಕೇಶ್ ರಕ್ಷಣೆಗೆ ಧಾವಿಸಿ ತಾನೂ ಮೃತಪಟ್ಟಿದ್ದಾನೆ.
ಕುಟುಂಬದಲ್ಲಿ ಮತ್ತೋರ್ವ ಹೆಣ್ಣುಮಗಳ ವಿವಾಹವೂ ನಿಶ್ಚಯವಾದ ಸಂಭ್ರಮಕ್ಕೆ ಕುಟುಂಬದವರೆಲ್ಲಾ ಮಧ್ಯಾಹ್ನದ ಬಳಿಕ ಹೇಮಾವತಿ ಹಿನ್ನೀರಿನ ಬಳಿ ವಿಹಾರ ಹೋಗಿದ್ದ ಸಂದರ್ಭ ದುರ್ಘಟನೆ ನಡೆದಿದೆ. ನದಿಯಲ್ಲಿ ಮರಳು ತೆಗೆಯಲು ಮಾಡಿದ್ದ ಗುಂಡಿಯೇ ಇಬ್ಬರನ್ನು ಬಲಿ ತೆಗೆದುಕೊಂಡಿತೆಂದು ಗ್ರಾಮಸ್ಥರು ದುಃಖ ವ್ಯಕ್ತಪಡಿಸಿದರು.
ಘಟನೆಯ ಸ್ಥಳಕ್ಕೆ ವೃತ್ತ ನಿರೀಕ್ಷಕ ನಂಜುಂಡೇಗೌಡ, ಶನಿವಾರಸಂತೆ ಪಿಎಸ್‍ಐ ಕೃಷ್ಣನಾಯಕ್, ಎಎಸ್‍ಐ ಗೋವಿಂದ್, ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ತೆರಳಿದ್ದರು. ತೀವ್ರ ಶೋಧದ ಬಳಿಕ ಅಗ್ನಿಶಾಮಕ ದಳದವರು ಇಬ್ಬರ ಮೃತದೇಹವನ್ನು ಹೊರ ತೆಗೆದರು.
ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯನ್ನು ಡಾ. ಇಂಧೂಧರ್ ನೆರವೇರಿಸಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.