ಪೊನ್ನಂಪೇಟೆ, ಮೇ 2 : ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರೆದಿದ್ದು ಏ. 30ರ ರಾತ್ರಿ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೂರು ಗ್ರಾಮದ ಮಾಚಿರ ಮುತ್ತಮ್ಮ ಎಂಬವರ ಹಸುವನ್ನು ಹುಲಿ ಕೊಟ್ಟಿಗೆಗೆ ನುಗ್ಗಿ ಕೊಂದುಹಾಕಿದೆ. ಕೆಲವು ದಿನಗಳ ಹಿಂದೆ ಇದೇ ಹಸುವಿನ ಕರುವನ್ನು ಹುಲಿ ಕೊಂದು ಹಾಕಿದ್ದರಿಂದ ಮುತ್ತಮ್ಮ ನವರು ಹಸುವನ್ನು ತಮ್ಮ ದನದ ಕೊಟ್ಟಿಗೆಗೆ ಬದಲಾಗಿ ಪಕ್ಕದ ಮನೆಯವರ ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದರು. ಆದರೂ ಈಗ ಮತ್ತೊಮ್ಮೆ ಅಲ್ಲಿಯೂ ಕೂಡ ಹುಲಿ ದಾಳಿ ಮಾಡಿದೆ. ಈ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಡೆಸಿದರೂ ಹುಲಿ ಪತ್ತೆಯಾಗದ ಕಾರಣ, ಹಸುವನ್ನು ಕೊಂದ ಸ್ಥಳದಲ್ಲಿ ಬೋನು ಇರಿಸಿ, ಹುಲಿಯ ಚಲನ ವಲನ ಖಚಿತಪಡಿಸಿಕೊಳ್ಳಲು ಕ್ಯಾಮರಾ ಅಳವಡಿಸಿದ್ದರು. ಆದರೆ ಹುಲಿ ಬೋನಿನ ಕಡೆ ಸುಳಿದಿಲ್ಲ. ಕ್ಯಾಮರಾ ಕಣ್ಣಿಗೂ ಕೂಡ ಕಾಣಿಸಿಕೊಂಡಿಲ್ಲ. ಹುಲಿ ಹಿಡಿಯುವ ಕಾರ್ಯಾಚರಣೆ ಮುಂದುವರೆದಿದೆ.
-ಚನ್ನನಾಯಕ