ಶನಿವಾರಸಂತೆ, ಮೇ 2: ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡ ಬಿಳಾಹ, ಕಿರುಬಿಳಾಹ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರು ಭಯ ಭೀತರಾಗಿದ್ದಾರೆ.

ಇದೀಗ ಶನಿವಾರಸಂತೆಯ ಸಮೀಪವೇ ಚಿರತೆ ತನ್ನ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದೆ. ಇತ್ತೀಚೆಗೆ ಶನಿವಾರಸಂತೆಯ ಬಿದರೂರು ರಸ್ತೆಯ ಕಾವೇರಿ ಕಾಲೇಜಿನ ಪಕ್ಕದ ಬಿದರೂರು ಕಾಂತರಾಜು ಅವರ ಕಾಫಿ ತೋಟದ ಒಳಗಡೆ ಒಂದು ಚಿರತೆ ತನ್ನ ಎರಡು ಮರಿಗಳೊಂದಿಗೆ ಕೆಲಸಗಾರರಿಗೆ ಕಾಣಿಸಿಕೊಂಡಿದೆ.

ಬೆಳಿಗ್ಗೆ-ಸಂಜೆ ಈ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಇರುವುದರಿಂದ ಈ ರಸ್ತೆಯಲ್ಲಿ ಅನೇಕರು ವಾಕಿಂಗ್ ಮಾಡುತ್ತಾರೆ. ಕಾಂತರಾಜ್ ಅವರು ಚಿರತೆ, ಚಿರತೆಯ ಮರಿಗಳು ಕಾಣಿಸಿಕೊಂಡ ವಿಚಾರ ತಿಳಿಸಿದ ಮೇರೆ ವಾಕಿಂಗ್ ಹೋಗುವವರ ಸಂಖ್ಯೆ ಕಡಿಮೆಯಾ ಗಿದೆ. ಇದೀಗ ಗೋಪಾಲಪುರ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ಒಂದು ನಾಯಿಯನ್ನು ಎಳೆದೊಯ್ದಿದೆ.

ಗದ್ದೆ-ತೋಟಗಳಲ್ಲಿ ಕೆಲಸ ಮಾಡುವ ಗ್ರಾಮಸ್ಥರಿಗೆ ಭಯದ ವಾತಾವರಣ ಉಂಟಾಗಿದೆ. ಅದಲ್ಲದೆ ಇತ್ತೀಚೆಗೆ ಕೊಡಗಿನ ಗಡಿ ಭಾಗದ ಯಸಳೂರು ಅರಣ್ಯದಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೆಕ್ಕೆಹನಲು ಗ್ರಾಮದ ಎರಡು ಜಾನುವಾರುಗಳನ್ನು ಬಲಿ ಪಡೆದ ಚಿರತೆ ಇದೀಗ ಮನುಷ್ಯರ ಬಲಿಗಾಗಿ ಹೊಂಚು ಹಾಕುತ್ತಿದೆ ಎನ್ನಲಾಗಿದೆ.

ವಿಚಾರ ತಿಳಿದ ಶನಿವಾರಸಂತೆ ಅರಣ್ಯ ಇಲಾಖೆಯ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ತನ್ನ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲಿಸಿರುತ್ತಾರೆ.