ಕಣಿವೆ, ಮೇ 2: ಕಾರ್ಮಿಕರ ದಿನದ ಅಂಗವಾಗಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಕಾರ್ಯ ಮಾಡುವ ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಆಸ್ಪತ್ರೆಯಲ್ಲಿ ಕರ್ತವ್ಯ ಎಸಗುವ ಐವರು ಮಹಿಳಾ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಧುಸೂದನ್ ಮಾತನಾಡಿ ಆಸ್ಪತ್ರೆಯ ಸ್ವಚ್ಛತೆ ಹಾಗೂ ರೋಗಿಗಳ ಲಾಲನೆ ಪಾಲನೆಯಲ್ಲಿ ನೆರವಾಗುವ ಆಸ್ಪತ್ರೆಯ ಕೆಳ ದರ್ಜೆಯ ಸಿಬ್ಬಂದಿಗಳ ಸೇವೆಯನ್ನು ಮನಗಂಡು ಆಸ್ಪತ್ರೆಯ ಹಿರಿಯ ಫಾರ್ಮಾಸಿಸ್ಟ್ ಬಿ. ನಟರಾಜು ಅವರು ವೈಯಕ್ತಿಕ ಆಸಕ್ತಿ ವಹಿಸಿ ಅವರನ್ನು ಗೌರವಿಸಿರುವುದು ಆಸ್ಪತ್ರೆಯ ಘನತೆಗೆ ಮತ್ತಷ್ಟು ಗೌರವ ತಂದಂತಾಗಿದೆ. ಇಲ್ಲಿ ವೈದ್ಯರು, ದಾದಿಯರು, ಸ್ವಚ್ಛತಾ ಸಿಬ್ಬಂದಿಗಳು ಎಲ್ಲರೂ ಸೇವಾ ಮನೋಭಾವದಿಂದ ಕರ್ತವ್ಯ ಮಾಡಿದಾಗ ಮಾತ್ರ ಸಾರ್ವಜನಿಕರಿಂದ ಪ್ರಶಂಸೆ ದೊರಕುತ್ತದೆ ಎಂದರು.
ಹಿರಿಯ ಫಾರ್ಮಾಸಿಸ್ಟ್ ಬಿ. ನಟರಾಜು ಮಾತನಾಡಿ, ಕೊರೊನಾ ವಾರಿಯರ್ಸ್ ಜೊತೆಗೆ ಆಸ್ಪತ್ರೆಯ ಮಲಿನತೆ ತೊಲಗಿಸಿ ಮಡಿವಂತಿಕೆಗೆ ಶ್ರಮಿಸುವ ಸಿಬ್ಬಂದಿಗಳ ಸೇವೆ ಅನನ್ಯವಾದುದು. ಕಾರ್ಮಿಕರ ದಿನವನ್ನು ಆಸ್ಪತ್ರೆಯಲ್ಲಿನ ಸ್ವಚ್ಛತಾ ಸಿಬ್ವಂದಿಗಳಾದ ಶಾರದಾ, ಸುಜಾತ, ಶೈಲರಾಣಿ, ಮಂಜುಳಾ ಹಾಗೂ ಲೀಲಮ್ಮ ಅವರಿಗೆ ಅರ್ಪಿಸುವ ಮೂಲಕ ಅವರನ್ನು ಗೌರವಿಸಲಾಗಿದೆ ಎಂದರು. ಡಾ. ರಕ್ಷಿತ್, ಶುಶ್ರೂಷಕಿ ನೇತ್ರಾವತಿ, ಸಿಬ್ವಂದಿ ಗಣೇಶ್ ಇದ್ದರು.
ಕುಶಾಲನಗರ: ಸೋಮವಾರಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಕುಶಾಲನಗರದ ಸೋಮೇಶ್ವರ ಬಡಾವಣೆಯ ನಾಗರಿಕ ವೇದಿಕೆ ವತಿಯಿಂದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಬಡಾವಣೆಯ ಉದ್ಯಾನವನದಲ್ಲಿ ನಡೆದ ಸರಳ ಕಾರ್ಯಕ್ರಮವನ್ನು ಕುಶಾಲನಗರ ಪ.ಪಂ. ಸದಸ್ಯ ಡಿ.ಕೆ. ತಿಮ್ಮಪ್ಪ ಉದ್ಘಾಟಿಸಿದರು. ಕಾಯಕಯೋಗಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಡಾವಣೆಯ ಹಿರಿಯ ನಾಗರಿಕ ನಿವೃತ್ತ ಪ್ರಾಂಶುಪಾಲ ಹೆಚ್.ಎನ್. ನಾಗರಾಜಾಚಾರಿ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿಯ 30 ಮಂದಿ ಪೌರಕಾರ್ಮಿಕರಿಗೆ ಟೀ ಶರ್ಟ್ ನೀಡಿ ಅವರ ಕಾರ್ಯವನ್ನು ಗೌರವಿಸಲಾಯಿತು.
ಸಹಾಯಕ ಪ್ರಾಧ್ಯಾಪಕ ಪ್ರಕಾಶ್ ದಿನದ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭ ಕುಶಾಲನಗರ ಪ.ಪಂ. ಸದಸ್ಯೆ ರೂಪಾ ಉಮಾಶಂಕರ್, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಿ. ಮಹದೇವಪ್ಪ ಮತ್ತಿತರರು ಇದ್ದರು.
ಸಿದ್ದಾಪುರ: ಸಿದ್ದಾಪುರದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಸಿಐಟಿಯು ಸಂಘಟನೆ ವತಿಯಿಂದ ಸರಳವಾಗಿ ಆಚರಿಸಲಾಯಿತು ಸಂಘಟನೆಯ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಸಂಘಟನೆಯ ಹೆಚ್.ಬಿ. ರಮೇಶ್ ಎನ್.ಡಿ. ಕುಟ್ಟಪ್ಪ ಹಾಗೂ ಇತರರು ಹಾಜರಿದ್ದರು.